ADVERTISEMENT

ಬೆಳಗಾವಿ ಕೆಎಲ್‌ಇ ಆಸ್ಪತ್ರೆಯಲ್ಲಿ ಹಾವೇರಿ ಯುವಕನಿಗೆ ಯಶಸ್ವಿ ಲಿವರ್‌ ಕಸಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 11:14 IST
Last Updated 20 ಅಕ್ಟೋಬರ್ 2022, 11:14 IST
ಬೆಳಗಾವಿ ಕೆಎಲ್‌ಇ ಆಸ್ಪತ್ರೆ
ಬೆಳಗಾವಿ ಕೆಎಲ್‌ಇ ಆಸ್ಪತ್ರೆ   

ಬೆಳಗಾವಿ: ‘ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 19 ವರ್ಷದ ಯುವಕನಿಗೆ ಯಶಸ್ವಿಯಾಗಿ ಯಕೃತ್‌ (ಲಿವರ್‌) ಕಸಿ ಮಾಡಲಾಗಿದೆ’ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

‘ಹಾವೇರಿಯ ದರ್ಶನ್‌ ಯಕೃತ್‌ ಸಮಸ್ಯೆಯಿಂದ ಬಳಲುತ್ತಿದ್ದರು. ಯಕೃತ್‌ ಕಸಿ‌ಗಾಗಿ ಅವರು ಕೆಎಲ್‌ಇಎಸ್‌ ಆಸ್ಪತ್ರೆಗೆ ನೋಂದಣಿ ಮಾಡಿಸಿದ್ದರು. ಇತ್ತೀಚೆಗಷ್ಟೇ ಅಥಣಿಯ 30 ವರ್ಷದ ಯುವಕನ ಮಿದುಳು ನಿಷ್ಕ್ರಿಯಗೊಂಡಿತ್ತು. ಅಂಗಾಂಗ ದಾನ ಮಾಡಿದ್ದರು. ಅವರ ಯಕೃತ್ತನ್ನೇ ದರ್ಶನ್‌ ಅವರಿಗೆ ಕಸಿ ಮಾಡಲಾಗಿದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬೆಂಗಳೂರು, ಮುಂಬೈ, ಹೈದರಾಬಾದ್‌ನಂತಹ ನಗರಗಳ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದಲ್ಲಿ ಯಕೃತ್‌ ಕಸಿ ಮಾಡಲಾಗುತ್ತದೆ. ಅಲ್ಲಿಗಿಂತ ಅರ್ಧದಷ್ಟು ವೆಚ್ಚದಲ್ಲಿ ಕೆಎಲ್‌ಇಎಸ್‌ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಆಸ್ಪತ್ರೆಯ ಗ್ಯಾಸ್ಟ್ರೊಎಂಟ್ರಾಲಜಿ ವಿಭಾಗದ ಡಾ.ಸಂತೋಷ ಹಜಾರೆ, ಡಾ.ಸುದರ್ಶನ ಚೌಗುಲೆ ಮತ್ತು ಬೆಂಗಳೂರಿನ ಅಸ್ಟರ್‌ ಆಸ್ಪತ್ರೆಯ ಡಾ.ಸೋನಲ್‌ ಆಸ್ಥಾನಾ ಅವರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಅರಿವಳಿಕೆ ತಜ್ಞರಾದ ಡಾ.ಅರುಣ, ಡಾ.ರಾಜೇಶ ಮಾನೆ, ಡಾ.ಮಂಜುನಾಥ, ಜೀವ ಸಾರ್ಥಕತೆ, ಮೋಹನ ಫೌಂಡೇಷನ್‌ ಮತ್ತು ಕಸಿ ಸಂಯೋಜಕರ ತಂಡ ಇದಕ್ಕೆ ಕೈ ಜೋಡಿಸಿದೆ’ ಎಂದು ಹೇಳಿದರು.

‘ಈ ಶಸ್ತ್ರಚಿಕಿತ್ಸೆಗೆ 12ರಿಂದ 18 ತಾಸು ಬೇಕು. ಕ್ಲಿಷ್ಟಕರ ಚಿಕಿತ್ಸೆಯನ್ನು ಮೊದಲ ಯತ್ನದಲ್ಲೇ ಯಶಸ್ವಿ ಮಾಡಿದ್ದೇವೆ. ಈಗಾಗಲೇ 50ಕ್ಕಿಂತ ಅಧಿಕ ಜನರಿಗೆ ಕಿಡ್ನಿ ಕಸಿ, 8 ಮಂದಿಗೆ ಹೃದಯ ಕಸಿ ಮಾಡಿದ್ದೇವೆ. ಪುಪ್ಪಸ ಕಸಿಗೆ ಪ್ರಯೋಗ ನಡೆಸಿದ್ದೇವೆ. ಈ ಬಗ್ಗೆ ತರಬೇತಿಗಾಗಿ ಮೂವರು ತಜ್ಞರ ತಂಡವನ್ನು ಅಮೆರಿಕಕ್ಕೆ ಕಳುಹಿಸಲಾಗುವುದು’ ಎಂದು ತಿಳಿಸಿದರು.

‘ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡಿದರೆ, ವಿವಿಧ ಅಂಗಗಳ ವೈಫಲ್ಯದಿಂದ ಬಳಲುವ ನಾಲ್ಕೈದು ಜನರಿಗೆ ಅನುಕೂಲವಾಗುತ್ತದೆ. ಆದರೆ, ಕೆಲವರಲ್ಲಿ ಅಂಗಾಂಗ ದಾನದ ಬಗ್ಗೆ ಮೌಢ್ಯಗಳಿವೆ. ಅದರಿಂದ ಹೊರಬಂದು ಅಂಗಾಂಗ ದಾನ ಮಾಡಬೇಕು’ ಎಂದು ಕೋರಿದರು.

‘ನನಗೆ ಯಕೃತ್‌ ದಾನ ಮಾಡಿದ ಮತ್ತು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ ತಂಡಕ್ಕೆ ಸದಾ ಕೃತಜ್ಞ. ನನ್ನಂತೆ ಹಲವರು ವಿವಿಧ ಅಂಗಾಂಗಗಳ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮಿದುಳು ನಿಷ್ಕ್ರಿಯಗೊಂಡವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ಮುಂದೆ ಬರಬೇಕು’ ಎಂದು ದರ್ಶನ್‌ ಹೇಳಿದರು.

ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ, ಬಹುವಿಧ ಅಂಗಾಂಗ ಘಟಕದ ಅಧ್ಯಕ್ಷ ಡಾ.ಆರ್‌.ಬಿ.ನೇರ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.