ಬೆಳಗಾವಿ: ‘ರಾಜ್ಯವು ಈ ಬಾರಿ ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಮಳೆ ಕೊರತೆಯಿದ್ದರೂ ಉತ್ಪಾದನೆ ಹೆಚ್ಚಾಗಿದ್ದು ವಿಶೇಷ’ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
‘ಮುಂಬರುವ ಹಂಗಾಮಿನಲ್ಲಿ 6 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸುವ ಗುರಿಯಿದ್ದು, ಹೊಸ ಆವಿಷ್ಕಾರಗಳ ಕುರಿತು ತಜ್ಞರು ತಾಂತ್ರಿಕ ಸಮಾವೇಶ ನಡೆಸಿ ಮಾರ್ಗದರ್ಶನ ಮಾಡಿದ್ದಾರೆ. ರಾಜ್ಯದಲ್ಲಿ 80 ಸಕ್ಕರೆ ಕಾರ್ಖಾನೆಗಳಿವೆ. ಮುಚ್ಚಿದ ಸಕ್ಕರೆ ಕಾರ್ಖಾನೆಗಳನ್ನು ಪುನರಾರಂಭಕ್ಕೆ ಪ್ರಯತ್ನಿಸಲಾಗುವುದು’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಕಬ್ಬು ಪೂರೈಸಿದ ರೈತರಿಗೆ ₹18 ಸಾವಿರ ಕೋಟಿ ಬಿಲ್ ನೀಡಲಾಗಿದೆ. ಬಹುಪಾಲು ಪಾವತಿಯಾಗಿದ್ದು, ₹700 ಕೋಟಿ ಬಾಕಿ ಇದೆ. ಅದನ್ನೂ ಬೇಗ ಪಾವತಿಸುವಂತೆ ಕಾರ್ಖಾನೆಗಳಿಗೆ ಸೂಚಿಸಲಾಗುವುದು’ ಎಂದರು.
‘ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ₹77 ಕೋಟಿ ಮೌಲ್ಯದ ಸಕ್ಕರೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಬೇಕಿದೆ. ಚಳಿಗಾಲದ ಅಧಿವೇಶನ ವೇಳೆ ಪಂಚಮಸಾಲಿ ಮುಖಂಡರ ಮೇಲೆ ಲಾಠಿ ಚಾರ್ಜ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ತನಿಖೆ ನಡೆಯುತ್ತಿದೆ. ಅದು ಪೂರ್ಣಗೊಂಡ ಬಳಿಕವೇ ಎಲ್ಲವೂ ತಿಳಿಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.