ADVERTISEMENT

ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 16:42 IST
Last Updated 20 ನವೆಂಬರ್ 2019, 16:42 IST
ಅಥಣಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2019-20ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು
ಅಥಣಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2019-20ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು   

ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2019-20ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು.

ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ‘ಪ್ರಸ್ತುತ ಸಾಲಿಗೆ ಕೇಂದ್ರ ಸರ್ಕಾರವು ನಮ್ಮ ಕಾರ್ಖಾನೆಗೆ ಟನ್ ಕಬ್ಬಿಗೆ ₹ 3,157 ಎಫ್‌ಆರ್‌ಪಿ (ಕಟಾವು ಹಾಗೂ ಸಾಗಾಣಿಕೆ ವೆಚ್ಚ ಸಹಿತ) ನಿಗದಿಪಡಿಸಿದೆ. ಕಳೆದ ಸಾಲುಗಳಲ್ಲೂ ಎಫ್‌ಆರ್‌ಪಿಗಿಂತಲೂ ಹೆಚ್ಚಿನ ದರ ಕೊಟ್ಟಿದ್ದೆವು. ಪ್ರಸಕ್ತ ವರ್ಷದಲ್ಲಿ ಕೃಷ್ಣಾ ನದಿಯ ಪ್ರವಾಹದಿಂದ ಹಲವು ಗ್ರಾಮಗಳಲ್ಲಿ ಉಂಟಾಗಿರುವ ಸಂಕಷ್ಟ, ರೈತರಿಗೆ ಆದ ಹಾನಿ ಗಮನದಲ್ಲಿಟ್ಟುಕೊಂಡು ಟನ್‌ ಕಬ್ಬಿಗೆ ₹ 2,700 (ಕಟ್ಟು ಕಟಾವು ಹಾಗೂ ಸಾಗಣೆ ವೆಚ್ಚ ಹೊರತುಪಡಿಸಿ) ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ರೈತರು ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಇಳುವರಿಯುಳ್ಳ ಕಬ್ಬನ್ನು ಪೂರೈಕೆ ಮಾಡಬೇಕು. ಕಳೆದ ಸಾಲಿನಲ್ಲಿ 7.35 ಲಕ್ಷ ಮೆ. ಟನ್ ಕಬ್ಬು ನುರಿಸಿದ್ದೇವೆ. ಈ ಹಂಗಾಮಿನಲ್ಲಿ ಕನಿಷ್ಠ 6 ಲಕ್ಷ ಮೆ. ಟನ್ ಕಬ್ಬು ನುರಿಸಿದರೆ ಲಾಭದಾಯಕವಾಗಲಿದೆ. ಇಲ್ಲದಿದ್ದರೆ ಕಾರ್ಖಾನೆ ನಷ್ಟ ಅನುಭವಿಸಬೇಕಾಗುತ್ತದೆ. ಪ್ರಸ್ತುತ ಬಿಲ್‌ ನೀಡುತ್ತಿಲ್ಲ ಎಂಬುದು ಮುಖ್ಯವಲ್ಲ. ಕಳೆದ ಹಂಗಾಮಿನಲ್ಲಿ ನೀಡಿದ ಬೆಲೆ ಮುಖ್ಯ. ಹೀಗಾಗಿ ಎಲ್ಲ ರೈತರು ನಿಮ್ಮದೇ ಆದ ಕಾರ್ಖಾನೆ ರಕ್ಷಿಸಬೇಕು’ ಎಂದು ಕೋರಿದರು.

ADVERTISEMENT

ಪೂಜೆ ಸಲ್ಲಿಸಿ ಚಾಲನೆ ನೀಡಿದ ಇಂಚಲದ ಶಿವಾನಂದ ಭಾರತಿ ಸ್ವಾಮೀಜಿ, ‘ಸಕ್ಕರೆ ಕಾರ್ಖಾನೆಗಳು ರೈತರ ಜೀವಾಳ. ರೈತರು ಕಬ್ಬು ಪೂರೈಸಬೇಕು. ಕಾರ್ಖಾನೆಗಳು ಉತ್ತಮ ಬೆಲೆ ನೀಡಬೇಕು. ಪರಸ್ಪರ ಒಗ್ಗಟ್ಟಿನಿಂದ ಇದ್ದರೆ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.

ಹುಲಿಗೆರೆಯ ವೀರಯ್ಯ ಸ್ಪಾಮೀಜಿ, ಉಪಾಧ್ಯಕ್ಷ ಜ್ಯೋತಿಗೌಡ ಪಾಟೀಲ, ನಿರ್ದೇಶಕರಾದ ಗುರಬಸು ಮು. ತೆವರಮನಿ, ಸಿ.ಎಚ್. ಪಾಟೀಲ, ಶಾಂತಿನಾಥ, ನಂದೇಶ್ವರ, ಗುಳಪ್ಪ ಮ ಜತ್ತಿ, ವಿಶ್ವನಾಥ ಪಾಟೀಲ, ಅಮಗೊಂಡ ಖೊಬ್ರಿ, ರಮೇಶ ಪಟ್ಟಣ, ರುಕ್ಮಿಣಿ ವಿ. ಕುಲಕರ್ಣಿ, ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಪಾಟೀಲ, ಕಚೇರಿ ಸೂಪರಿಂಟೆಂಡೆಂಟ್‌ ಸುರೇಶ ಠಕ್ಕಣ್ಣವರ ಇದ್ದರು.

ಜಿ.ಎಂ. ಜತ್ತಿ ಸ್ವಾಗತಿಸಿದರು. ಎಸ್.ಬಿ. ಗೊಟಖಿಂಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.