ಗೋಕಾಕ ತಾಲ್ಲೂಕಿನ ಘಟಪ್ರಭಾ ಮತ್ತು ಸುತ್ತ-ಮುತ್ತಲಿನ ಪ್ರದೇಶದ ಫಲವತ್ತಾದ ಕೃಷಿ ಭೂಮಿಯಲ್ಲಿ ಕಂಡು ಬಂದಿರುವ ದೊಣ್ಣೆ ಹುಳುಗಳು.
ಘಟಪ್ರಭಾ (ಗೋಕಾಕ): ಘಟಪ್ರಭಾ ಹಾಗೂ ಸತ್ತ-ಮುತ್ತಲಿನ ಫಲವತ್ತಾದ ಕೃಷಿ ಭೂಮಿಯಲ್ಲಿ ದೊಣ್ಣೆ ಹುಳುವಿನ ಕಾಟ ಹೆಚ್ಚಾಗಿದ್ದು ರೈತರು ಕಂಗಾಲಾಗಿದ್ದಾರೆ.
ಮುಖ್ಯವಾಗಿ ಧುಪದಾಳ, ಮಲ್ಲಾಪೂರ ಪಿ.ಜಿ. ಸೇರಿದಂತೆ ಅನೇಕ ಗ್ರಾಮಗಳ ಕೃಷಿ ಭೂಮಿಯಲ್ಲಿ ದೊಣ್ಣೆ ಹುಳುವಿನ ಬಾಧೆ ಅಧಿಕವಾಗಿ ಪರಿಣಮಿಸಿದೆ. ಕಬ್ಬಿನ ಗದ್ದೆಗೆ ಬಿದ್ದಿರುವ ದೊಣ್ಣೆ ಹುಳುಗಳು ಕಬ್ಬಿನ ಬೇರುಗಳನ್ನು ತಿನ್ನುತ್ತಿರುವುದರಿಂದ ಕಬ್ಬು ಮುರಿದು ಹೊಲದಲ್ಲಿ ಬಿದ್ದು ಒಣಗಿ ಹೋಗುತ್ತಿದೆ. ಇದರಿಂದ ಹೊಲದ ತುಂಬ ಕಬ್ಬು ಅಡ್ಡಾದಿಡ್ಡಿಯಾಗಿ ಬಿದ್ದು ಒಣಗಿರುವ ದೃಶ್ಯ ಕಂಡು ಬರುತ್ತಿದೆ. ಒಂದು ವರ್ಷ ಶ್ರಮದ ಬೆಳೆ ಕಬ್ಬು ಅರೆಯುವ ಕಾರ್ಖಾನೆ ಆರಂಭಕ್ಕೂ ಮುನ್ನವೇ ನೆಲಕಚ್ಚುತ್ತಿರುವುದು ಕಬ್ಬು ಬೆಳೆಗಾರ ರೈತರನ್ನು ಆತಂಕಕ್ಕೀಡು ಮಾಡಿದೆ.
ಕೃಷಿ ಇಲಾಖೆಯ ಅಧಿಕಾರಿಗಳು ದೊಣ್ಣೆ ಹುಳು ನಿಯಂತ್ರಣ ಮತ್ತು ನಾಶಕ್ಕೆ ಉಪಾಯ ಕಂಡು ಹಿಡಿದು ಉಳಿದಿರುವ ಅಲ್ಪಸ್ವಲ್ಪ ಕಬ್ಬು ಬೆಳೆ ನಾಶವಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಕೃಷಿಕ ಬಾಂಧವರ ಅಧಿಕಾರಿಗಳ ಭೇಟಿಯ ಎದುರು ನೋಡುತ್ತಿದ್ದಾರೆ. ದೊಣ್ಣೆ ಹುಳು ಬಾಧೆಗೊಳಗಾದ ಈ ಭಾಗದ ಕೃಷಿಕರಿಗೆ ಪರಿಹಾರ ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.