ADVERTISEMENT

ಚಿಕ್ಕೋಡಿ | ಕಬ್ಬಿಗೆ ದರ ನಿಗದಿಗೆ ರೈತರ ಒತ್ತಾಯ

ಚಿಕ್ಕೋಡಿಯಲ್ಲಿ ರಸ್ತೆ ತಡೆದು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 5:12 IST
Last Updated 3 ನವೆಂಬರ್ 2025, 5:12 IST
ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಬ್ಬಿಗೆ ದರ ನಿಗದಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು
ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಬ್ಬಿಗೆ ದರ ನಿಗದಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು   

ಚಿಕ್ಕೋಡಿ: ಪ್ರತಿ ಟನ್ ಕಬ್ಬಿಗೆ ₹3,500 ದರವನ್ನು ಸಕ್ಕರೆ ಕಾರ್ಖಾನೆಗಳು ನಿಗದಿ ಮಾಡಿ ಕಾರ್ಖಾನೆಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಸ್ವಾಭಿಮಾನಿ ಶೇತ್ಕರಿ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ನೆರೆಯ ಮಹಾರಾಷ್ಟ್ರದ ಕಡೆಗೆ ಭಾನುವಾರ ಬೆಳಿಗ್ಗೆ ತಾಲ್ಲೂಕು ವ್ಯಾಪ್ತಿಯ ವಿವಿಧ ಭಾಗಗಳಿಂದ ಕಬ್ಬು ತುಂಬಿದ ಟ್ರ್ಯಾಕ್ಟರ್ ಹೋಗುತ್ತಿರುವ ವಿಷಯ ತಿಳಿದ ರೈತ ಮುಖಂಡರು ಬಸವೇಶ್ವರ ವೃತ್ತದ ಬಳಿಯಲ್ಲಿ ಟ್ರ್ಯಾಕ್ಟರ್ ತಡೆದು ಪ್ರತಿಭಟನೆ ಪ್ರಾರಂಭಿಸಿದರು.

ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ ₹3,700 ದರ ಘೋಷಣೆ ಮಾಡುವಂತೆ ಅಲ್ಲಿನ ಸ್ವಾಭಿಮಾನಿ ಶೇತ್ಕರಿ ಸಂಘಟನೆಯು ಪ್ರತಿಭಟನೆ ಮಾಡುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿ ಮಾಡುವ ಬೇಡಿಕೆಯು ಇಲ್ಲಿನ ರೈತರದಾಗಿದೆ. ಮುಧೋಳ-ನಿಪ್ಪಾಣಿ ಹಾಗೂ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಗಳು ಸಂಧಿಸುವ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ರೈತರು ಪ್ರತಿಭಟನೆ ಮಾಡುತ್ತಿದ್ದರಿಂದ ವಾಹನ ಸವಾರರು ಪರದಾಡಿದರು.

ADVERTISEMENT

ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸತ್ಯಪ್ಪ ವಲ್ಯಾಪೂರೆ, ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ನಿಪ್ಪಾಣಿ ತಾಲ್ಲೂಕು ಅಧ್ಯಕ್ಷ ರಮೇಶ ಪಾಟೀಲ, ರಾಜು ಖಿಚಡೆ, ಜೆಡಿಎಸ್ ಮುಖಂಡ ಕಾಡಗೌಡ ಪಾಟೀಲ ಮುಂತಾದವರು ಮಾತನಾಡಿದರು.

ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದ ರೈತರು ರಸ್ತೆ ಮೇಲೆಯೇ ಅಡುಗೆ ಮಾಡಿ ಊಟ ಮಾಡಿ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.

ಪೊಲೀಸರು ಬಂದೋಬಸ್ತ್ ಮಾಡಿದ್ದರು. ಪಟ್ಟಣಕ್ಕೆ ಬರುವ ಬಸ್‌ ಹಾಗೂ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗದಲ್ಲಿ ತೆರಳುವ ವ್ಯವಸ್ಥೆ  ಮಾಡಲಾಗಿದೆ.

ಮಾರುತಿ ದೊಡಮನಿ, ಆನಂದ ಪಾಶ್ಚಾಪೂರೆ, ಕುಮಾರ ವಿಜಯ ಪೂಜೇರಿ, ರಾಜೇಂದ್ರ ಪಾಶ್ಚಾಪೂರೆ, ಬಸವಣ್ಣಿ ಕವಣಿ, ಮನೋಜ ಮನಗೂಳಿ, ಶಂಕರ ಪಡೇದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.