ADVERTISEMENT

ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿದ ರಾಹುಲ್ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 12:12 IST
Last Updated 20 ಅಕ್ಟೋಬರ್ 2021, 12:12 IST
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಖಂಡ ರಾಹುಲ್ ಜಾರಕಿಹೊಳಿ ಮಾತನಾಡಿದರು
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಖಂಡ ರಾಹುಲ್ ಜಾರಕಿಹೊಳಿ ಮಾತನಾಡಿದರು   

ಬೆಳಗಾವಿ: ‘ಮಹರ್ಷಿ ವಾಲ್ಮೀಕಿ ಜ್ಞಾನದ ಆಗರವಾಗಿದ್ದಾರೆ. ರಾಮಾಯಣ ಮಹಾಕಾವ್ಯದ ಮೂಲಕ ತಮ್ಮಲ್ಲಿನ ಜ್ಞಾನ ಭಂಡಾರವನ್ನು ಜಗತ್ತಿಗೆ ಪರಿಚಯಿಸಿದ್ದಾರೆ’ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ವಾಲ್ಮೀಕಿ ಯುವ ಸಂಘ ಹಾಗೂ ಮಹಿಳಾ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜನಸಮುದಾಯದ ಎಲ್ಲ ಸಮಸ್ಯೆಗಳು, ಸಂಕಟಗಳು ಹಾಗೂ ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಮತ್ತು ಪರಿಹಾರವಿದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ’ ಎಂದರು.

ADVERTISEMENT

‘ಸಮಾಜದವರು ಮಕ್ಕಳಿಗೆ ವಾಲ್ಮೀಕಿ ಜೀವನದ ಕುರಿತು ತಿಳಿಸಬೇಕು. ಉತ್ತಮ ಶಿಕ್ಷಣ ಕೊಡಿಸಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಳ ಸಮುದಾಯವಾದ ಈ ಸಮಾಜಕ್ಕೆ ರಾಜಕೀಯವಾಗಿ ಸಿಕ್ಕಿರುವ ಮೀಸಲಾತಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಿಗಬೇಕಾಗಿದೆ’ ಎಂದು ಹೇಳಿದರು.

‘ವಾಲ್ಮೀಕಿ ಮಹಾನ್ ವ್ಯಕ್ತಿಯಾಗಿದ್ದು, ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮುಖಂಡರಾದ ಸಿದ್ದು ಸುಣಗಾರ, ಯಲ್ಲಪ್ಪ ಬುದ್ರಿ, ಬೀಮಗೌಡ ಪಾಟೀಲ, ಸುನೀಲ ಸುಣಗಾರ, ವಿಜಯ ವನಮನಿ, ಮಹಾದೇವಿ ಚೌಗಲಾ, ಭೀಮರಾಯಿ ನಾಯಿಕ್, ಬಾಲಕೃಷ್ಣ ಪಾಟೀಲ, ರವೀಂದ್ರ ನಾಯ್ಕರ, ಶಿವರಾಯಿ ಪಾಟೀಲ, ಮುಶಪ್ಪ ಪಾಟೀಲ, ಸುರೇಶ ನಾಯ್ಕ, ದಯಾನಂದ ಪಾಟೀಲ, ರಾಮಣ್ಣ ಗುಳ್ಳಿ, ಭೀಮರಾಯಿ ಕಟಬಾಳಿ, ಸಣ್ಣಪ್ಪ ಕಟಬಾಳಿ, ಪರಸಪ್ಪ ಕಟಬಾಳಿ, ನಾಗಪ್ಪ ನಾಯಕ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ವಾಲ್ಮೀಕಿ ಯುವ ಸಂಘದಿಂದ ವಂಟಮುರಿ ಗ್ರಾಮದಿಂದ ಭೂತರಾಮನಹಟ್ಟಿವರೆಗೆ ಅದ್ಧೂರಿ ಬೈಕ್ ರ್‍ಯಾಲಿ ನಡೆಯಿತು. ರಾಹುಲ್ ತೆರೆದ ಜೀಪ್‌ನಲ್ಲಿ ಸಾಗಿದರೆ, ಯುವಕರು ದ್ವಿಚಕ್ರವಾಹನಗಳಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.