ADVERTISEMENT

ನೀರನ್ನೂ ಕೊಡದಿದ್ದರೆ ಹೇಗೆ?:ಅಧಿಕಾರಿಗಳಿಗೆ ವಿಧಾನಸಭೆ ಉಪಸಭಾಧ್ಯಕ್ಷ ಮಾಮನಿ ತರಾಟೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 12:10 IST
Last Updated 20 ಅಕ್ಟೋಬರ್ 2021, 12:10 IST
ಯಲ್ಲಮ್ಮನಗುಡ್ಡದಲ್ಲಿ ಮಂಗಳವಾರ ನಡೆದ ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿದರು
ಯಲ್ಲಮ್ಮನಗುಡ್ಡದಲ್ಲಿ ಮಂಗಳವಾರ ನಡೆದ ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿದರು   

ಉಗರಗೋಳ: ‘ಇಷ್ಟವಿದ್ದರೆ ಪ್ರಾಮಾಣಿಕವಾಗಿ ಕೆಲಸ ಮಾಡಿ. ಇಲ್ಲವೇ ವರ್ಗಾವಣೆ ಮಾಡಿಸಿಕೊಂಡು ಹೋಗಿ’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಯಲ್ಲಮ್ಮನಗುಡ್ಡದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವ್ಯವಸ್ಥಾಪನಾ ಸಮಿತಿಯವರು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಭೆಯಲ್ಲಿ ಅವರು ಮಾತನಾಡಿದರು.

‘ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಇಲ್ಲಿಗೆ ಬರುವ ಭಕ್ತರು ಹಾಗೂ ವ್ಯಾಪಾರಿಗಳಿಗೆ ಕುಡಿಯುವ ನೀರು ಕೂಡ ಕೊಡದಿದ್ದರೆ ಹೇಗೆ?’ ಎಂದು ಕೇಳಿದರು.

ADVERTISEMENT

‘ಇನ್ಮುಂದೆ ನಿರ್ಲಕ್ಷ್ಯ ಸಲ್ಲದು. ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ತ್ವರಿತವಾಗಿ ಭಕ್ತರ ಸಮಸ್ಯೆಗೆ ಸ್ಪಂದಿಸಬೇಕು. ಎಲ್ಲರೂ ಒಗ್ಗಟ್ಟಾಗಿರಬೇಕು. ಶ್ರೀಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ನಿರ್ದೇಶನ ನೀಡಿದರು.

‘ದೂರದಿಂದ ಬರುವ ಭಕ್ತರಿಗೆ ಅಗತ್ಯ ಮಾಹಿತಿ ನೀಡಲು ಮೊದಲ ಕೌಂಟರ್‌ನಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ವ್ಯವಸ್ಥೆ ಮಾಡಬೇಕು. ಮೂರು ಕಡೆಯ ನಾಕಾಗಳಲ್ಲಿ ದೇವಸ್ಥಾನದ ಸಿಬ್ಬಂದಿಯೇ ಕಾರ್ಯನಿರ್ವಹಿಸಬೇಕು. ಪವಿತ್ರ ಎಣ್ಣೆ ಹೊಂಡದ ನೀರನ್ನು ಕೆಲವರು ಮಾರುತ್ತಿರುವುದು ಕಂಡು ಬಂದಿದ್ದು, ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. ಯಲ್ಲಮ್ಮ ದೇವಸ್ಥಾನದ ನಾಲ್ಕು ದ್ವಾರ ಬಾಗಿಲುಗಳನ್ನೂ ತೆರೆಯಬೇಕು. ಶುಚಿತ್ವಕ್ಕೂ ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.

‘ದೇವಸ್ಥಾನದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸರ್ಕಾರದಿಂದಲೇ ವಸತಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತೇನೆ. 6ನೇ ವೇತನ ಜಾರಿಯಾಗಿದೆ. ಸಿಬ್ಬಂದಿ ಹಾಗೂ ಅಧಿಕಾರಿಗಳ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುತ್ತೇನೆ. ಯಲ್ಲಮ್ಮನಗುಡ್ಡ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ವೈ.ವೈ. ಕಾಳಪ್ಪನವರ, ಸುನೀಲ ಪೂಜಾರಿ, ಕೋಳ್ಳಪ್ಪಗೌಡ ಗಂದಿಗವಾಡ, ಲಕ್ಷ್ಮಿ ಹೂಲಿ, ಪುಂಡಲೀಕ ಮೇಟಿ, ರಮೇಶ ಗೋಮಡಿ, ಈರಣ್ಣ ಚಂದರಗಿ, ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ಶಿವಾನಂದ ಗುಡನಟ್ಟಿ, ದೇವಸ್ಥಾನ ಕಾರ್ಯರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.