ADVERTISEMENT

ಬೆಳಗಾವಿ: ಬಳಕೆಯಾಗದ ಸುವರ್ಣ ವಿಧಾನಸೌಧ ಹೆಲಿಪ್ಯಾಡ್

ನಾಯಿಗಳ ಓಡಾಟ, ಮಳೆ ನೀರು ಸಂಗ್ರಹವಾಗುತ್ತಿದೆ!

ಎಂ.ಮಹೇಶ
Published 5 ಜೂನ್ 2021, 19:30 IST
Last Updated 5 ಜೂನ್ 2021, 19:30 IST
ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ನೀರು ಸಂಗ್ರಹವಾಗಿದೆ ಹಾಗೂ ಬೀದಿನಾಯಿಗಳು ಮಲಗಿವೆಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ನೀರು ಸಂಗ್ರಹವಾಗಿದೆ ಹಾಗೂ ಬೀದಿನಾಯಿಗಳು ಮಲಗಿವೆಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹೆಲಿ‍ಪ್ಯಾಡ್ ಹಲವು ವರ್ಷಗಳಿಂದಲೂ ಬಳಕೆಯಾಗದೆ ಬೀದಿ ನಾಯಿಗಳ ವಾಸಸ್ಥಾನವಾಗಿ ಪರಿವರ್ತನೆಯಾಗಿದೆ.

2016ರ ನವೆಂಬರ್‌ ವೇಳೆಗೆ ಈ ಹೆಲಿಪ್ಯಾಡ್ ಸಿದ್ಧವಾಗಿತ್ತು. ಆ ವರ್ಷ ನಡೆದಿದ್ದ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್‌ನಲ್ಲಿ ಬಂದು ಈ ಹೆಲಿಪ್ಯಾಡ್ ಬಳಸಿದ್ದರು. ಶಾಸಕ ರಮೇಶ ಜಾರಕಿಹೊಳಿ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಲ್ಲಿಂದ ಗೋಕಾಕಕ್ಕೂ ಅವರು ಪ್ರಯಾಣಿಸಿದ್ದರು. ಅದಾದ ನಂತರ ನಿಯಮಿತವಾಗಿ ಬಳಕೆಯಾಗಿಲ್ಲ. ಪರಿಣಾಮ, ಅಲ್ಲಿನ ಮಾರ್ಕ್‌ಗಳು ಕೂಡ ಅಳಿಸಿ ಹೋಗಿವೆ. ಅಲ್ಲದೇ, ಮಳೆ ನೀರು ಕೂಡ ಸಂಗ್ರಹವಾಗಿ ಅದರಲ್ಲಿ ಸುವರ್ಣ ವಿಧಾನಸೌಧದ ಬಿಂಬ ಅದರಲ್ಲಿ ಕಾಣಿಸುತ್ತಿದೆ. ‘ನನ್ನಂತೆ ನೀನೂ ಬಳಕಗೆ ಬಾರದಂತಾದೆಯಾ’ ಎಂದು ಅಣಕಿಸುವಂತಿಲ್ಲ ಅಲ್ಲಿನ ನೋಟ! ಸುತ್ತಲೂ ನಿರ್ವಹಣೆಯಿಲ್ಲದೆ ಹುಲ್ಲು ಬೆಳೆದಿದೆ.

ಬರುತ್ತಿಲ್ಲ: ಹೆಲಿಪ್ಯಾಡ್‌ ಸಂಪೂರ್ಣ ಸುಸಜ್ಜಿತವಾಗಿದ್ದು, ಎಲ್ಲ ಮಾದರಿಯ ಹೆಲಿಕಾಪ್ಟರ್‌ಗಳೂ ಕಾರ್ಯಾಚರಣೆ ನಡೆಸಬಹುದು ಎಂದು ಆಗ ಹೇಳಲಾಗಿತ್ತು. ಆದರೆ, ವಿಐಪಿಗಳು ಇದನ್ನು ಬಳಸಿಕೊಳ್ಳುತ್ತಿಲ್ಲ. ಶುಕ್ರವಾರ ಕೋವಿಡ್ ನಿರ್ವಹಣೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶೇಷ ವಿಮಾನದಲ್ಲಿ ಬಂದಿಳಿದು ಸಾಂಬ್ರಾ ವಿಮಾನನಿಲ್ದಾಣದಿಂದ ಸುವರ್ಣ ವಿಧಾನಸೌಧಕ್ಕೆ ರಸ್ತೆ ಮಾರ್ಗವಾಗಿ ಬಂದರು.

ADVERTISEMENT

ಸುವರ್ಣ ವಿಧಾನಸೌಧದಲ್ಲಿ ಸತತ ಎರಡು ವರ್ಷಗಳಿಂದ ವಿಧಾನಮಂಡಲ ಅಧಿವೇಶನವನ್ನೂ ನಡೆಸಲಾಗಿಲ್ಲ. 2009ರಲ್ಲಿ ನೆರೆ ಪರಿಹಾರ ಕಾರ್ಯದ ಕಾರಣ ಹೇಳಲಾಯಿತು. ಹೋದ ವರ್ಷ ಕೋವಿಡ್–19 ಸಾಂಕ್ರಾಮಿಕ ಅಡ್ಡಿ ಎಂದು ಸರ್ಕಾರ ಹೇಳಿತು.

ಸಾಂಬ್ರಾದಿಂದ ಬರುತ್ತಾರೆ: ವಿಐಪಿಗಳು ಬೆಂಗಳೂರಿನಿಂದ ಸುವರ್ಣ ವಿಧಾನಸೌಧಕ್ಕೆ ನೇರವಾಗಿ ಬಂದಿಳಿಯಲೆಂದು 150 ಮೀಟರ್‌ ಅಂತರದಲ್ಲಿ ನಿರ್ಮಿಸಿದ ಹೆಲಿಪ್ಯಾಡ್‌ ಇದಾಗಿದೆ. ಚಳಿಗಾಲದ ಅಧಿವೇಶನಕ್ಕೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಸಂಪೂರ್ಣ ವಾಯುಮಾರ್ಗವನ್ನೇ ಬಳಸಿ ಬರಲು ಅನುಕೂಲವಾಗಲಿದೆ ಎಂದು ಆಶಿಸಲಾಗಿತ್ತು. ಆದಾಗ್ಯೂ ನಗರದಿಂದ 13 ಕಿ.ಕೀ. ದೂರದಲ್ಲಿರುವ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರುವುದು, ಅಲ್ಲಿಂದ ರಸ್ತೆ ಮಾರ್ಗವಾಗಿ ಸುವರ್ಣ ವಿಧಾನಸೌಧ ತಲುಪುವುದು ತಪ್ಪಿಲ್ಲ. ಗಣ್ಯರ ವಾಹನಗಳ ಸಂಚಾರದ ಕಾರಣಕ್ಕೆ ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿ ಮತ್ತು ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುವುದು ಕೂಡ ನಿಂತಿಲ್ಲ. ಪೊಲೀಸರು ಜನರ ವಾಹನಗಳನ್ನು ತಡೆದು ನಿಲ್ಲಿಸಿ, ವಿವಿಐಪಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ಕೂಡ ತಪ್ಪಿಲ್ಲ.

ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರೂ ಬಳಸಿರಲಿಲ್ಲ.

14,400 ಚದರ ಅಡಿ ವಿಸ್ತೀರ್ಣದ ಈ ಹೆಲಿಪ್ಯಾಡ್‌ನಿಂದಾಗಿ ಅಧಿವೇಶನವಷ್ಟೆ ಅಲ್ಲದೆ ನಗರ ಮತ್ತು ಜಿಲ್ಲೆಯಲ್ಲಿ ನಡೆಯಲಿರುವ ಬೇರೆ ಕಾರ್ಯಕ್ರಮಗಳಿಗೆ ಗಣ್ಯರು ಆಗಮಿಸುವುದಕ್ಕೂ ಅನುಕೂಲವಾಗಿದೆ. ಅಲ್ಲಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಬಳಸಿ ಜಿಲ್ಲೆಯ ಬೇರೆ ಬೇರೆ ಸ್ಥಳಗಳಿಗೂ ಸಂಚರಿಸಬಹುದು. ಇದರಿಂದ ಸಮಯದ ಉಳಿತಾಯವೂ ಆಗಲಿದೆ ಎಂದು ಆಶಿಸಲಾಗಿತ್ತು. ಆದರೆ, ಈ ಆಶಯ ಸಂಪೂರ್ಣವಾಗಿ ಈಡೇರಿಲ್ಲ. ಏಕೆಂದರೆ, ಈ ಹೆಲಿಪ್ಯಾಡ್ ಇಷ್ಟು ವರ್ಷಗಳಲ್ಲಿ ಮೂರು ಬಾರಿಯಷ್ಟೇ ಬಳಕೆಯಾಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.