ಬೆಳಗಾವಿ: ‘ಪಂಚಮಸಾಲಿಗರಿಗೆ 2ಎ ಮೀಸಲಾತಿ ಹೋರಾಟ ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ರಾಜ್ಯ ಸರ್ಕಾರದ ದೌರ್ಜನ್ಯ ಖಂಡಿಸಿ ರಾಜ್ಯದ ಪ್ರತಿ ಗ್ರಾಮದಲ್ಲಿ ‘ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ’ ಹಮ್ಮಿಕೊಳ್ಳಲಾಗುವುದು. ಜ.14ರಂದು ಕೂಡಲಸಂಗಮದಿಂದ ಆರಂಭಿಸಲಾಗುವುದು’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
‘ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಂವಾದ ಮಾಡಿ, ಜಾಗೃತಿ ಮೂಡಿಸಲಾಗುವುದು. ತಾಲ್ಲೂಕು ಕೇಂದ್ರಗಳಲ್ಲೂ ಸಭೆ ನಡೆಸಿ ಜನರ ಸಲಹೆ–ಸೂಚನೆಗಳನ್ನು ಕ್ರೋಡೀಕರಿಸಿ ಮುಂದಿನ ಹೋರಾಟ ನಿರ್ಧರಿಸಲಾಗುವುದು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಲಾಠಿಚಾರ್ಜ್‌ನಲ್ಲಿ ಗಾಯಗೊಂಡವರ ಮನೆಗೆ ಭೇಟಿ ನೀಡಿ ‘ಬಸವ ರಕ್ಷಾ’ ಪತ್ರ ಕೊಟ್ಟು ಧೈರ್ಯ
ತುಂಬುತ್ತಿದ್ದೇನೆ. ‘ರಕ್ತ ಚೆಲ್ಲಿದ್ದೀರಿ ಮೀಸಲಾತಿ ಪಡೆಯೋಣ’ ಎಂಬ ಘೋಷ ವಾಕ್ಯದೊಂದಿಗೆ ನಮ್ಮ ಹೋರಾಟ ಆರಂಭವಾಗಲಿದೆ. ಮೀಸಲಾತಿ ಕೊಡುವುದು ಅಸಾಂವಿಧಾನಿಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅವರ ಹೇಳಿಕೆಯೇ ಅಸಾಂವಿಧಾನಿಕ’ ಎಂದು ಸ್ವಾಮೀಜಿ ಹರಿಹಾಯ್ದರು.
‘ಲಾಠಿಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲು ವಿನಂತಿಸಿದ್ದೆವು. ಆದರೆ, ಅವರಿಗೆ ₹10 ಸಾವಿರ ಬಹುಮಾನ ನೀಡಿ ಪ್ರಚೋದನೆ ನೀಡಿದ್ದಾರೆ’ ಎಂದು ಆರೋಪಿಸಿದರು.
‘ಪಂಚಮಸಾಲಿ ವಕೀಲರ ಪರಿಷತ್ ಮೂಲಕ ಲಾಠಿಚಾರ್ಜ್ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ರಾಜ್ಯ ಗೃಹ ಇಲಾಖೆಯನ್ನೇ ಹೈಕೋರ್ಟ್ ಪ್ರತಿವಾದಿ ಮಾಡಿ, ಸ್ಪಷ್ಟೀಕರಣ ಕೇಳಿದೆ’ ಎಂದರು.
‘ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ವೀರಪ್ಪ ಮೊಯ್ಲಿ, ಬಸವರಾಜ್ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಜಾತಿ–ಜನಾಂಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಆಗ ಯಾವುದೇ ಆಯೋಗದ ವರದಿ ಪಡೆದಿಲ್ಲ. ಆಗ ಅಸಾಂವಿಧಾನಿಕ ಎಂದೂ ಪರಿಗಣಿಸಿಲ್ಲ. ಈಗ ಪಂಚಮಸಾಲಿಗಳಿಗೆ ಮಾತ್ರ ಈ ನಿಯಮಗಳು ಅಡ್ಡಬಂದಿವೆ’ ಎಂದು ಆಕ್ಷೇಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.