ADVERTISEMENT

ಬೆಳಗಾವಿ | ಜನರ ಸೆಳೆಯುತ್ತಿರುವ ಸ್ವಾಮಿ ಸಮರ್ಥ ಮಂದಿರ ಮಾದರಿ

ಇಮಾಮ್‌ಹುಸೇನ್‌ ಗೂಡುನವರ
Published 27 ಸೆಪ್ಟೆಂಬರ್ 2023, 4:19 IST
Last Updated 27 ಸೆಪ್ಟೆಂಬರ್ 2023, 4:19 IST
ಬೆಳಗಾವಿಯ ಗಾಂಧಿ ನಗರದ ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ನಿರ್ಮಿಸಿದ ಅಕ್ಕಲಕೋಟೆಯ ಸ್ವಾಮಿ ಸಮರ್ಥ ಮಂದಿರದ ಮಾದರಿ ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿದೆ– ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಬೆಳಗಾವಿಯ ಗಾಂಧಿ ನಗರದ ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ನಿರ್ಮಿಸಿದ ಅಕ್ಕಲಕೋಟೆಯ ಸ್ವಾಮಿ ಸಮರ್ಥ ಮಂದಿರದ ಮಾದರಿ ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿದೆ– ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ   

ಬೆಳಗಾವಿ: ನೀವೂ ಸ್ವಾಮಿ ಸಮರ್ಥ ಮಂದಿರ ಕಣ್ತುಂಬಿಕೊಳ್ಳಬೇಕೇ? ಹಾಗಾದರೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆಗೆ ಹೋಗಬೇಕಿಲ್ಲ. ಇಲ್ಲಿನ ಗಾಂಧಿ ನಗರದ ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಮಂಟಪಕ್ಕೆ ಬನ್ನಿ.

ಕಳೆದ 33 ವರ್ಷಗಳಿಂದ ಸಾರ್ವಜನಿಕ ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತಿರುವ ಈ ಮಂಡಳಿ, ಪ್ರಸಕ್ತ ವರ್ಷ ಅಕ್ಕಲಕೋಟೆಯ ಸ್ವಾಮಿ ಸಮರ್ಥ ಮಂದಿರದ ಮಾದರಿಯಲ್ಲಿ ಭವ್ಯವಾದ ಮಂಟಪ ಸಿದ್ಧಪಡಿಸಿದೆ.

ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿರುವ ಮಂಟಪ, ಜನರನ್ನು ತನ್ನತ್ತ ಸಳೆಯುತ್ತಿದೆ. ಇದನ್ನು ಪ್ರವೇಶಿಸುತ್ತಿದ್ದಂತೆ, ಜನರಿಗೆ ಮಂದಿರಕ್ಕೇ ಹೋದ ಅನುಭವವಾಗುತ್ತಿದೆ. ಇಲ್ಲಿ ‘ವಿಘ್ನ ನಿವಾರಕ’ನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಸ್ವಾಮಿ ಸಮರ್ಥ ಅವರ ಭಾವಚಿತ್ರ ಮತ್ತು ಪಾದುಕೆ ಇರಿಸಲಾಗಿದೆ. ಅವರು ಜನರಿಗೆ ನೀಡಿದ್ದ ಸಂದೇಶಗಳನ್ನು ಫಲಕಗಳನ್ನು ಅಳವಡಿಸಲಾಗಿದೆ.

ADVERTISEMENT
ಗಣೇಶೋತ್ಸವಕ್ಕೂ ಎರಡು ತಿಂಗಳು ಮುನ್ನ ಎಲ್ಲ ಸಮುದಾಯಗಳ ವ್ಯಾಪಾರಸ್ಥರೆಲ್ಲ ಸೇರಿಕೊಂಡು ಸಭೆ ನಡೆಸಿ ಧಾರ್ಮಿಕ ಕೇಂದ್ರದ ಮಾದರಿ ನಿರ್ಮಿಸಬೇಕೆಂದು ನಿರ್ಣಯಿಸುತ್ತೇವೆ
ಕಿರಣ ಸಾವಂತ, ಅಧ್ಯಕ್ಷ, ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ

ಧಾರ್ಮಿಕ ಕೇಂದ್ರಗಳನ್ನು ಪರಿಚಯಿಸುವ ಉದ್ದೇಶ: ದೇಶದಲ್ಲಿ ಹೆಚ್ಚಿನ ಭಕ್ತರನ್ನು ಹೊಂದಿದ ಧಾರ್ಮಿಕ ಕೇಂದ್ರಗಳನ್ನು ಈ ಭಾಗದವರಿಗೆ ಪರಿಚಯಿಸುವುದು ಈ ಮಂಡಳಿ ಉದ್ದೇಶ. ಹಾಗಾಗಿ ಪ್ರತಿವರ್ಷವೂ ಒಂದೊಂದು ಧಾರ್ಮಿಕ ಕೇಂದ್ರದ ಮಾದರಿ ಸಿದ್ಧಪಡಿಸುತ್ತಿದೆ. ಈ ಹಿಂದೆ ಅಮರನಾಥ ಗುಹೆ, ತಿರುಪತಿ, ಪಂಢರಪುರದ ವಿಠ್ಠಲನ ದೇವಸ್ಥಾನ, 12 ಜ್ಯೋತಿರ್ಲಿಂಗಗಳು, ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಐಕ್ಯ ಮಂಟಪ ಮತ್ತಿತರ ಧಾರ್ಮಿಕ ಸ್ಥಳಗಳ ಮಾದರಿ ನಿರ್ಮಿಸಿ ಗಮನಸೆಳೆದಿತ್ತು. ಈ ವರ್ಷವೂ ಆ ಪರಂಪರೆ ಮುಂದುವರಿಸಿದೆ.

ಈ ಹಿಂದೆ ಹಳೆಯ ಪಿ.ಬಿ. ರಸ್ತೆಯ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಈಗ ಗಾಂಧಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣವಾದ ಹೊಸ ಮಾರುಕಟ್ಟೆಯ ಸ್ಥಳದಲ್ಲಿ ಗಣಪ ಪ್ರತಿಷ್ಠಾಪನೆಗೊಂಡಿದ್ದಾನೆ.

‘ಬೆಳಗಾವಿಯಿಂದ 350 ಕಿ.ಮೀ ದೂರದಲ್ಲಿ ಅಕ್ಕಲಕೋಟೆ ಇದೆ. ಈ ಭಾಗದ ಎಲ್ಲ ಜನರಿಗೆ, ಅದರಲ್ಲೂ ವಿಶೇಷವಾಗಿ ರೈತರಿಗೆ ಅಲ್ಲಿಗೆ ಹೋಗಿ ಸ್ವಾಮಿ ಸಮರ್ಥ ಮಂದಿರ ವೀಕ್ಷಿಸಲಾಗದು. ಹಾಗಾಗಿ ಅದೇ ಮಾದರಿಯಲ್ಲಿ ಮಂಟಪ ಸಿದ್ಧಗೊಳಿಸಿದ್ದೇವೆ. ಬೆಳಗಾವಿ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ಗಣೇಶನ ವೀಕ್ಷಣೆಗೆ ಬರುತ್ತಿರುವವರು ಸ್ವತಃ ಅಕ್ಕಲಕೋಟೆಗೆ ಹೋದಂತೆ ಖುಷಿಪಡುತ್ತಿದ್ದಾರೆ’ ಎಂದು ಮಂಡಳಿಯ ಉಪಾಧ್ಯಕ್ಷ ಶಿವಾನಂದ ಶಿರಗಾಂವಕರ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಗಾವಿಯ ಗಾಂಧಿ ನಗರದ ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ನಿರ್ಮಿಸಿದ ಅಕ್ಕಲಕೋಟೆಯ ಸ್ವಾಮಿ ಸಮರ್ಥ ಮಂದಿರದ ಮಾದರಿ ಗಮನಸೆಳೆಯುತ್ತಿದೆ ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.