ADVERTISEMENT

ಕೂಡಮಸಂಗಮ ಸ್ವಾಮೀಜಿ ಮುಖ್ಯಮಂತ್ರಿ ಜೊತೆ ಚರ್ಚೆಗೆ ಬರಲಿ: ನಿರಾಣಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 10:09 IST
Last Updated 16 ಜನವರಿ 2021, 10:09 IST

ಬೆಳಗಾವಿ: 'ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ ವಿಷಯವಾಗಿ ಪಾದಯಾತ್ರೆ ಕೈಗೊಂಡಿರುವ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಜೊತೆ ಚರ್ಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ಧರಿದ್ದಾರೆ' ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಮೀಸಲಾತಿಗೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸಮಾಜಕ್ಕೆ ಅವಕಾಶ ಸಿಗಬೇಕೆಂಬ ಆಸೆ ನಮ್ಮದು. ಸ್ವಾಮೀಜಿ ಹಾಗೂ ಅವರ ಸುತ್ತಲಿರುವ ಎಲ್ಲರೂ ಬುದ್ಧಿವಂತರಿದ್ದಾರೆ. ಹೋರಾಟದ ಜೊತೆಗೆ ಸ್ವಾಮೀಜಿಯು ಮುಖ್ಯಮಂತ್ರಿಯೊಂದಿಗೆ ಮಾತುಕತೆಗೂ ಬರಬೇಕು. ಸ್ವಾಮೀಜಿಯವರ ಬೇಡಿಕೆ, ಅದಕ್ಕೆ ಬೇಕಾದ ಪರಿಹಾರದ ಬಗ್ಗೆ ಮುಖ್ಯಮಂತ್ರಿ ಜೊತೆ ಕುಳಿತು ಚರ್ಚಿಸಬಹುದು. ಮುಖ್ಯಮಂತ್ರಿ ತಮ್ಮ ಇತಿಮಿತಿಯಲ್ಲಿ ಬೇಡಿಕೆ ಈಡೇರಿಸಲು ಸಿದ್ಧರಿದ್ದಾರೆ ಎಂದರು.

ಬಸನಗೌಡ ಪಾಟೀಲ ಯತ್ನಾಳ ಸಿ.ಡಿ. ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಸೋಮವಾರ ಸಚಿವರಿಗೆ ಖಾತೆ ಹಂಚಿಕೆ ಆಗಲಿದೆ. ಯಾವುದೇ ಖಾತೆ ಕೊಟ್ಟರೂ ಸರ್ಕಾರ ಹಾಗೂ ಪಕ್ಷಕ್ಕೆ ಒಳ್ಳೆಯ ಹೆಸರು ತರುತ್ತೇನೆ. ಉಮೇಶ್ ಕತ್ತಿ ಅವರು ಎಂಟು ಬಾರಿ ಶಾಸಕರಾಗಿದ್ದಾರೆ. ಅವರ ಹಿರಿತನ ಆಧರಿಸಿ ಮುಖ್ಯಮಂತ್ರಿ ಸೂಕ್ತ ಸ್ಥಾನಮಾನ ನೀಡಲಿದ್ದಾರೆ. ನಾನು ಹಿಂದೆಯೂ ಯಾವುದೇ ಖಾತೆ ಕೇಳಿಲ್ಲ; ಈಗಲೂ ಕೇಳೋಲ್ಲ' ಎಂದು ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.