ADVERTISEMENT

ಜನರ ಸುರಕ್ಷತೆಗೆ ಗಮನಹರಿಸಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 14:22 IST
Last Updated 19 ಜೂನ್ 2021, 14:22 IST
ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಎನ್‌ಎಸ್‌ಎಫ್‌ ಅತಿಥಿ ಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದರು
ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಎನ್‌ಎಸ್‌ಎಫ್‌ ಅತಿಥಿ ಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದರು   

ಗೋಕಾಕ: ‘ನದಿ ತೀರದ ಗ್ರಾಮಗಳ ಜನರ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಗೃಹ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಪ್ರವಾಹ ಪರಿಸ್ಥಿತಿ ಎದುರಿಸಲು ಸೂಕ್ತ ಕ್ರಮಗಳನ್ನು ಈಗಿಂದಲೇ ತೆಗೆದುಕೊಳ್ಳಬೇಕು’ ಎಂದು ತಿಳಿಸಿದರು.

‘ನಿರಂತರ ಮಳೆಯಿಂದಾಗಿ ಹಿರಣ್ಯಕೇಶಿ, ಮಾರ್ಕಂಡೇಯ ನದಿಗೆ ಮತ್ತು ಬಳ್ಳಾರಿ ನಾಲಾದಿಂದ ಘಟಪ್ರಭಾ ನದಿಗೆ ಹೆಚ್ಚಿನ ನೀರು ಸೇರುತ್ತಿದೆ. ಜನರಲ್ಲಿ ಪ್ರವಾಹ ಭೀತಿ ಎದುರಾಗುತ್ತಿದ್ದು ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳಿಗೂ ಸಮಸ್ಯೆ ಎದುರಾಗಬಹುದು. ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು’ ಎಂದು ತಾಕೀತು ಮಾಡಿದರು.

ADVERTISEMENT

‘ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ನದಿ ತೀರದ ಗ್ರಾಮಗಳಿಗೆ ಆತಂಕವಿಲ್ಲವಾದರೂ ಸುರಕ್ಷತಾ ಕ್ರಮ ಅತ್ಯವಶ್ಯವಾಗಿದೆ. ಈ ನದಿಗಳ ಒಳಹರಿವು ಹೆಚ್ಚಾಗುತ್ತಿರುವುದರಿಂದ ಸಣ್ಣ ಸಣ್ಣ ಸೇತುವೆಗಳು ಮುಳುಗಡೆಯಾಗಿವೆ. ಇದರಿಂದ ಘಟಪ್ರಭಾ ನದಿ ತೀರದ ಗ್ರಾಮಗಳ ಜನರು ಪ್ರವಾಹದ ಆತಂಕದಲ್ಲಿದ್ದಾರೆ. ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಜನರನ್ನು ರಕ್ಷಿಸಲು ಮುಂಚಿತವಾಗಿಯೇ ಬೋಟ್‌ಗಳನ್ನು ಸಿದ್ಧವಿಟ್ಟುಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಗೋಕಾಕ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ತಾ.ಪಂ. ಇಒ ರಾಜೇಶ ಬೆನವಾಡಕರ, ಮೂಡಲಗಿ ತಹಶೀಲ್ದಾರ್‌ ಡಿ.ಜೆ. ಮಹಾತ, ಗೋಕಾಕ ಟಿಎಚ್ಒ ಡಾ.ಮುತ್ತಣ್ಣ ಕೊಪ್ಪದ, ಮೂಡಲಗಿ ಗ್ರೇಡ್-2 ತಹಶೀಲ್ದಾರ್‌ ಶಿವಾನಂದ ಬಬಲಿ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಆಂಟಿನ್, ಸಿಡಿಪಿಒ ವೈ.ಎಂ. ಗುಜನಟ್ಟಿ, ಮೂಡಲಗಿ ಬಿಇಒ ಅಜಿತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.