ಚಿಕ್ಕೋಡಿ: ‘ದಸರಾ ಹಬ್ಬದ ವೇಳೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದೇವೆ. ದೀಪಾವಳಿ ವೇಳೆಯಾದರೂ ಈ ಕೆಲಸದಿಂದ ವಿನಾಯಿತಿ ಕೊಡಿ’ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಜಿ.ಪಾಟೀಲ ಹೇಳಿದರು.
ಈ ಸಂಬಂಧ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಚಿಕ್ಕೋಡಿ ತಾಲ್ಲೂಕಿನಲ್ಲಿ ಶಿಕ್ಷಕರು ದಸರಾ ಆಚರಿಸದೆ, ಸಮೀಕ್ಷೆ ಮಾಡಿದ್ದಾರೆ. ಸಮೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲೇ ಚಿಕ್ಕೋಡಿ ತಾಲ್ಲೂಕು ಎರಡನೇ ಸ್ಥಾನದಲ್ಲಿದೆ. ಇನ್ನೆರಡು ದಿನವೂ ಸಮೀಕ್ಷೆ ಕೈಗೊಳ್ಳುತ್ತಾರೆ. ಬಾಕಿ ಉಳಿದ ಒಂದಿಷ್ಟು ಸಮೀಕ್ಷೆಯನ್ನು ವಿವಿಧ ಇಲಾಖೆಗಳ ಸಿಬ್ಬಂದಿ ಬಳಸಿಕೊಂಡು ಪೂರ್ಣಗೊಳಿಸಬೇಕು. ಕುಟುಂಬದೊಂದಿಗೆ ಸಂತಸದಿಂದ ದೀಪಾವಳಿ ಆಚರಿಸಲು ಶಿಕ್ಷಕರಿಗೆ ಅನುವು ಮಾಡಿಕೊಡಬೇಕು’ ಎಂದು ಕೋರಿದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ, ತಹಶೀಲ್ದಾರ್ ರಾಜೇಶ ಬುರ್ಲಿ ಚಿಕ್ಕೋಡಿ ಡಿಡಿಪಿಐ ಆರ್.ಎಸ್.ಸೀತಾರಾಮು, ಬಿಇಒ ಪ್ರಭಾವತಿ ಪಾಟೀಲ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್.ವಣ್ಣೂರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.