ADVERTISEMENT

ರಕ್ತಸಿಕ್ತ ನೆನಪುಗಳ ‘ವೀರ ಸುಬೇದಾರ’

ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ 30 ಗುಂಡು ಹೊಕ್ಕರೂ ಬದುಕಿಬಂದ ಪ್ರಕಾಶ

ಸಂತೋಷ ಈ.ಚಿನಗುಡಿ
Published 10 ಮೇ 2025, 5:07 IST
Last Updated 10 ಮೇ 2025, 5:07 IST
ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಬಲಗೈ ಸಂಪೂರ್ಣ ತುಂಡಾದರೂ ಸೇವೆಯಲ್ಲಿ ಮುಂದುವರಿದ ಸುಬೇದಾರ ಪ್ರಕಾಶ ಪಾಟೀಲ ಅವರಿಗೆ ಪದಕ ನೀಡಿದ ಸೇನಾಧಿಕಾರಿಗಳು (ಸಂಗ್ರಹ ಚಿತ್ರ)
ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಬಲಗೈ ಸಂಪೂರ್ಣ ತುಂಡಾದರೂ ಸೇವೆಯಲ್ಲಿ ಮುಂದುವರಿದ ಸುಬೇದಾರ ಪ್ರಕಾಶ ಪಾಟೀಲ ಅವರಿಗೆ ಪದಕ ನೀಡಿದ ಸೇನಾಧಿಕಾರಿಗಳು (ಸಂಗ್ರಹ ಚಿತ್ರ)   

ಬೆಳಗಾವಿ: ಶ್ರೀನಗರ ಬಳಿಯ ಕುಪ್ಪವಾಡ ಕಾಡಂಚಿನಲ್ಲಿ ಭಯೋತ್ಪಾದಕರು ಅಡಗಿದ್ದರು. ಆರು ಯೋಧರು ಶಸ್ತ್ರಾಸ್ತ್ರ ಹೆಗಲೇರಿಸಿಕೊಂಡು ಬೇಟೆಯಾಡಲು ಹೊರಟೆವು. ಪಾಪಿಗಳು ಹೊಂಚು ಹಾಕಿ ಕುಳಿತು, ಎದುರಿನಿಂದ ಗುಂಡಿನ ಸುರಿಮಳೆ ಮಾಡಿದರು. ನಾನು ಎಲ್ಲರಿಗಿಂತ ಮುಂದೆ ಇದ್ದೆ. ಮೈಯೊಳಗೆ 30 ಗುಂಡುಗಳು ಹೊಕ್ಕವು. ಮೂರು ತಿಂಗಳು ಕೋಮಾದಲ್ಲಿದ್ದೆ. ನನ್ನ ದಾರ ಗಟ್ಟಿ ಇತ್ತು. ಬದುಕಿಬಂದೆ...

ನಿಪ್ಪಾಣಿ ತಾಲ್ಲೂಕಿನ ಭೋಜವಾಡಿ ಮೂಲದವರಾದ ಸುಬೇದಾರ ಪ್ರಕಾಶ ಪಾಟೀಲ (56) ಅವರು ಇಂಥ ವೀರೋಚಿತ ಪರಾಕ್ರಮವನ್ನು ತೀರ ಸಾಮಾನ್ಯ ಘಟನೆ ಎಂಬಂತೆ ನೆನೆಯುತ್ತಾರೆ. ಮದ್ದು– ಗುಂಡು– ಸಾವು– ನೋವು– ವೈರಿಗಳ ಬೇಟೆಯಲ್ಲೇ ಜೀವನ ಕಳೆಯುವ ಒಬ್ಬ ಯೋಧನಿಗೆ ಇದೆಲ್ಲವೂ ಸಹಜ ಅನ್ನಿಸಿದ್ದರಲ್ಲಿ ಅಚ್ಚರಿ ಇಲ್ಲ.

ಸದ್ಯ ಬೆಳಗಾವಿಯ ಕ್ಯಾಂಪ್‌ ಪ್ರದೇಶದಲ್ಲಿ ಮನೆ ಕಟ್ಟಿಸಿಕೊಂಡು ನಿವೃತ್ತಿ ಜೀವನ ಸಾಗಿಸಿದ್ದಾರೆ ಪ್ರಕಾಶ. ಭಯೋತ್ಪಾದಕರ ಹುಟ್ಟಡಗಿಸಲು ಭಾರತ ಸಮರ ಸಾರಿದ ಈ ಸಂದರ್ಭದಲ್ಲಿ ‘ಪ್ರಜಾವಾಣಿ’ ಜತೆಗೆ ತಮ್ಮ ರೋಚಕ ಅನುಭವಗಳನ್ನು ಹಂಚಿಕೊಂಡರು.

ADVERTISEMENT

‘2006ರಲ್ಲಿ ಉಗ್ರರ ಅಡಗುದಾಣ ಜಾಲಾಡುತ್ತ ಹೊರಟಿದ್ದೇವು. ‘ಆಪರೇಷನ್‌ ಪರಾಕ್ರಮ್‌’ ಹೆಸರಿನಲ್ಲಿ ಆರು ಯೋಧರು ಮಧ್ಯರಾತ್ರಿ 1ರ ಸುಮಾರಿಗೆ ಕಾರ್ಯಾಚರಣೆ ಆರಂಭಿಸಿದೆವು. ಉಗ್ರರನ್ನು ಸದೆಬಡಿಯಬೇಕು ಎಂದು ತೀರ ಸಮೀಪಕ್ಕೆ ಹೆಜ್ಜೆ ಹಾಕುತ್ತಿದ್ದೆವು. ನಮ್ಮನ್ನು ಗಮನಿಸಿದ ಪಾಪಿಗಳು ಏಕಾಏಕಿ ಮನಸೋ ಇಚ್ಛೆ ಗುಂಡು ಹಾರಿಸಿದರು. 30 ಗುಂಡುಗಳು ನನ್ನ ದೇಹ ಹೊಕ್ಕವು. ಆತಂಕಿಗಳಿಗೆ ನಾವು ಎಷ್ಟು ಸಮೀಪ ಇದ್ದೇವೆಂದರೆ ಅವರು ಹೊಡೆದ ಗುಂಡು ನನ್ನ ಎದೆಯ ಬಲಭಾಗದಲ್ಲಿ ಹೊಕ್ಕು, ಬೆನ್ನಿನ ಮೂಲಕ ಪಾರಾಗಿ, ನನ್ನ ಹಿಂದಿದ್ದ ಯೋಧನಿಗೂ ನಾಟಿತ್ತು. ಮತ್ತೊಂದು ಗುಂಡು ಹೊಟ್ಟೆಯ ಎಡಭಾಗದಿಂದ ಬಲಭಾಗಕ್ಕೆ ಪಾರಾಗಿತ್ತು. ದೇಹದ ಎಲ್ಲ ಕಡೆ ಗುಂಡು ಬಿದ್ದವು. ನೆಲಕ್ಕೆ ಬಿದ್ದು ವಾಕಿಟಾಕಿ ಎತ್ತಿಕೊಂಡು ಉಳಿದ ಯೋಧರಿಗೂ ‘ಡೇಂಜರ್‌’ ಸಂದೇಶ ನೀಡಿದೆ. ಅವರೂ ಅಡಗಿದರು’ ಎಂದು ಸನ್ನಿವೇಶ ಬಿಚ್ಚಿಟ್ಟರು ಪ್ರಕಾಶ.

‘ಇಬ್ಬರು ಗಾಯಗೊಂಡೆವು. ನಾವೇ ಪ್ರಾಥಮಿಕ ಚಿಕಿತ್ಸೆ ಮಾಡಿಕೊಂಡೆವು. ರಕ್ತ ಹೊರಬೀಳದಂತೆ ಬಟ್ಟೆ ಕಟ್ಟಿಕೊಂಡೆ. ಕೆಲ ಹೊತ್ತಿನ ನಂತರ ಉಳಿದ ನಾಲ್ವರೂ ಧಾವಿಸಿ ಎತ್ತಿಕೊಂಡು ಹೊರಟರು. ಆಗಿನ ದುರ್ಗಮಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಶುರು ಮಾಡಿದರು. ನನ್ನ ಬಲಗೈ ತಂಬ ಗುಂಡುಗಳೇ ತುಂಬಿದ್ದವು. ಕೆಲ ವರ್ಷಗಳ ನಂತರ ಅದನ್ನು ಪೂರ್ಣವಾಗಿ ಕತ್ತರಿಸಿ ತೆಗೆದರು. ಜಠರ, ಪುಪ್ಪಸ, ಕರಳುಗಳಿಗೂ ಸಾಕಷ್ಟು ಹಾನಿ ಆಗಿದೆ. ಡೂಪ್ಲಿಕೇಟ್‌ಗಳ ಕಸಿ ಮಾಡಿ ಮತ್ತೆ ನನ್ನ ಜೀವ ಉಳಿಸಿದರು’ ಎಂದೂ ವೀರತನ, ಧೈರ್ಯತನ ನೆನಪಿಸಿಕೊಂಡರು.

‘ಬಳಿಕವೂ ನಾನು 12 ವರ್ಷ ಸೇವೆ ಸಲ್ಲಿಸಿದೆ. ಒಂದೇ ಕೈ ಇದ್ದುದರಿಂದ ಸೇನಾ ನೆಲೆಯ ಝರಾಕ್ಸ್‌ ಸೆಂಟರ್‌, ಎಸ್‌ಟಿಡಿ, ತಂಪು ಪಾನೀಯ ಮಳಿಗೆಗಳ ಮೇಲುಸ್ತುವಾರಿ ನೀಡಿದರು. ಈಗ ಎಲ್ಲವೂ ಕನಸೇನೋ ಎನ್ನುವಷ್ಟು ಭಯಾನಕವಾಗಿದೆ’ ಎಂದರು.

ಮೂರು ದಶಕ ಸೇವೆ: 1988ರಲ್ಲಿ ಮರಾಠಾ ರೆಜಿಮೆಂಟ್‌ ಮೂಲಕ ಸೇನೆ ಸೇರಿದ ಪ್ರಕಾಶ, 2018ರಲ್ಲಿ ನಿವೃತ್ತರಾದರು. ಬರೋಬ್ಬರಿ 30 ವರ್ಷ ಜಮ್ಮು– ಕಾಶ್ಮೀರ, ಪಠಾಣಕೋಟ್, ಗುಜರಾತ್‌, ಸಿಕ್ಕೀಮ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ.

ಅವರ ತಂದೆ ಕಲಗೌಡ, ತಾಯಿ ಮಾಲುತಾಯಿ, ಪತ್ನಿ ಸಂಗೀತಾ ಕೂಡ ದೇಶಭಕ್ತರು. ಪುತ್ರ ಹಾಗೂ ಇಬ್ಬರು ಪುತ್ರಿಯರ ಜತೆಗೆ ಅವರೀಗ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಮತ್ತೆ ಭಯೋತ್ಪಾದಕರು ಉಪಟಳ ನೀಡಿದ ಸುದ್ದಿ ಕೇಳಿ ವೀರಯೋಧನ ರಕ್ತ ಕುದಿಯುತ್ತಿದೆ. ರಕ್ತಸಿಕ್ತ ನೆನಪುಗಳು ಮತ್ತೆ ಹಸಿರಾಗಿವೆ.

ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಸುಬೇದಾರ ಪ್ರಕಾಶ ಪಾಟೀಲ ಅವರ ಬಲಗೈ ಸಂಪೂರ್ಣ ತುಂಡಾದಾಗ ಆರೋಗ್ಯ ವಿಚಾರಿಸಿದ ಸೇನಾಧಿಕಾರಿಗಳು  (ಸಂಗ್ರಹ ಚಿತ್ರ)

'ಈಗಲೂ ಸೇನೆಗೆ ನೆರವಾಗುವೆ'

ನಮ್ಮ ಸೇನೆಯಲ್ಲಿ ತುಂಬ ಸಾಮಾನ್ಯ ಶಸ್ತ್ರಾಸ್ತ್ರಗಳು ಇದ್ದಾಗಲೇ ನಾವು ಪಾಕಿಸ್ತಾನವನ್ನು ಹೊಡೆದುರುಳಿಸಿದ್ದೇವೆ. ಇದು ಆಧುನಿಕ ಭಾರತ. ವಿಶ್ವದ ಬಲಾಢ್ಯ ಸೈನ್ಯ ನಮ್ಮದು. ಈಗ ಭಯೋತ್ಪಾದನೆಯನ್ನು ಸಂಪೂರ್ಣ ನಿರ್ಣಾಮ ಮಾಡುವ ತಾಕತ್ತು ನಮಗಿದೆ’ ಎಂಬುದು ಸುಬೇದಾರ ಪ್ರಕಾಶ ಅವರ ವಿಶ್ವಾಸ. ‘ನಮ್ಮ ಸೇನೆ ಯಾವಾಗಲೂ ಸಮರ್ಥವಾಗಿದೆ. ಆದರೆ ಸಮರ್ಥ ನಾಯಕತ್ವ ಬೇಕಾಗಿತ್ತು. ಪ್ರಧಾನಿ ಮೋದಿ ಸೇನೆಗೆ ನೀಡಿದ ಪ್ರಾಧಾನ್ಯತೆ ಅವಶ್ಯವಾಗಿತ್ತು. ನಮ್ಮವರು ಕುದಿಯುತ್ತಿದ್ದಾರೆ ಕಾಯುತ್ತಿದ್ದಾರೆ. ‘ಸಿಂಧೂರ’ದ ಬೆಲೆ ಏನು ಎಂದು ಅವರಿಗೆ ತಿಳಿಸುತ್ತಾರೆ. ಅವಕಾಶ ಸಿಕ್ಕರೆ ನಾನೂ ಸೇನೆಗೆ ನೆರವಾಗುವೆ’ ಎಂಬ ಹಂಬಲ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.