ADVERTISEMENT

ಸಂವಿಧಾನ ಕೇವಲ ಕಾನೂನು ಅಲ್ಲ, ಮೂಲಮಂತ್ರ: ನ್ಯಾಯಮೂರ್ತಿ ಪ್ರಸನ್ನ ಬಿ. ವರಳೆ

​ಪ್ರಜಾವಾಣಿ ವಾರ್ತೆ
Published 10 ಮೇ 2025, 15:25 IST
Last Updated 10 ಮೇ 2025, 15:25 IST
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಕಾಲೇಜಿನಿಂದ ಆಯೋಜಿಸಿದ್ದ ‘ಭಾರತ ಸಂವಿಧಾನಕ್ಕೆ 75 ವರ್ಷ: ಸಂವಿಧಾನಿಕತೆಯ ಪುನರ್ ಆವಿಷ್ಕಾರ’ ಸಮಾವೇಶದಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಪ್ರಸನ್ನ ಬಿ. ವರಳೆ ಅವರು ಮಾತನಾಡಿದರು
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಕಾಲೇಜಿನಿಂದ ಆಯೋಜಿಸಿದ್ದ ‘ಭಾರತ ಸಂವಿಧಾನಕ್ಕೆ 75 ವರ್ಷ: ಸಂವಿಧಾನಿಕತೆಯ ಪುನರ್ ಆವಿಷ್ಕಾರ’ ಸಮಾವೇಶದಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಪ್ರಸನ್ನ ಬಿ. ವರಳೆ ಅವರು ಮಾತನಾಡಿದರು   

ಬೆಳಗಾವಿ: ‘ಸಂವಿಧಾನವು ಕೇವಲ ದಾಖಲೆ ಮಾತ್ರವಲ್ಲ. ಇದು ಸಮಾಜದ ಮೂಲಮಂತ್ರ. ಇದು ಕಾನೂನು ಒಪ್ಪಂದವಲ್ಲ, ಸಾಮಾಜಿಕ ಪಠ್ಯವಾಗಿದೆ. ಇಂಥ ಸಂವಿಧಾನ ಕೊಟ್ಟ ಅಂಬೇಡ್ಕರ್‌ ಅವರನ್ನು ಸದಾ ಸ್ಮರಿಸಬೇಕು’ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಪ್ರಸನ್ನ ಬಿ. ವರಳೆ ಹೇಳಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಕಾಲೇಜಿನಿಂದ ಜೆಎನ್‌ಎಂಸಿಯ ಡಾ.ಕೊಡ್ಕಣಿ ಸಭಾಂಗಣದಲ್ಲಿ, ‘ಭಾರತ ಸಂವಿಧಾನಕ್ಕೆ 75 ವರ್ಷ: ಸಂವಿಧಾನಿಕತೆಯ ಪುನರ್ ಆವಿಷ್ಕಾರ’ ಎಂಬ ವಿಷಯದ ಮೇಲೆ ಶನಿವಾರ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ  ಮಾತನಾಡಿದರು.

ಮಹಿಳೆಯರ ಮೇಲಾದ ದೌರ್ಜನ್ಯ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ‘ಸಂವಿಧಾನವು ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತಿದೆ. ಬಿಲ್ಕಿಸ್ ಬಾನು ಅವರ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿತು. ಇದು ಸುಪ್ರೀಂ ಕೋರ್ಟ್ ಮಹಿಳೆಯರ ಗೌರವ ಮತ್ತು ಹಕ್ಕುಗಳ ರಕ್ಷಣೆಗೆ ನಿಂತಿರುವುದನ್ನು ಸೂಚಿಸುತ್ತದೆ’ ಎಂದು ತಿಳಿಸಿದರು.

ADVERTISEMENT

‘ಇಂತಹ ಸಂವಿಧಾನವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಎಲ್ಲರ ಹಕ್ಕುಗಳನ್ನು ರಕ್ಷಿಸುವುದು ಅದರ ಮೂಲ ಧ್ಯೇಯವಾಗಿದೆ. ಗೌರವದೊಂದಿಗೆ ಬದುಕುವ ಹಕ್ಕು, ಗೋಪ್ಯತಾ ಹಕ್ಕು ಮಹದ್ವದ್ದಾಗಿವೆ’ ಎಂದೂ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ ಮಾತನಾಡಿದರು. ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಸಂದೀಪ್ ಶಾಸ್ತ್ರಿ ‘ದೃಷ್ಟಿಕೋನ, ಆಕಾಂಕ್ಷೆ ಮತ್ತು ಮಾರ್ಗ’ ಎಂಬ ಮೂರ ವಿಷಯಗಳ ಮಹತ್ವ ತಿಳಿಸಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ವಿಶ್ವನಾಥ ಐ.ಪಾಟೀಲ, ‘ಈ ಸುವರ್ಣ ಜಯಂತಿ ಆಚರಣೆಯ ಸಂದರ್ಭಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಮಾವೇಶ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಹಾಗೂ ಪ್ರಸ್ತುತ ಸಾಮರ್ಥ್ಯ ವೃದ್ಧಿಸಲಿ’ ಎಂದರು.

ಸ್ನೇಹಾ ದೊಡ್ಮಣಿ ಮತ್ತು ತಂಡದವರು ಪ್ರಾರ್ಥಿಸಿದರು. ಹುಬ್ಬಳ್ಳಿಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನ ಡೀನ್‌ ಜೆ.ಎಂ. ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಕಾನೂನು ಕಾಲೇಜು ಪ್ರಾಂಶುಪಾಲರಾದ ಜ್ಯೋತಿ ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ಸಂಯೋಜಕಿ ಸುಪ್ರಿಯಾ ಸ್ವಾಮಿ ವಂದಿಸಿದರು. ಪ್ರೇರಣಾ ಹನುಮಶೇಠ ನಿರೂಪಿಸಿದರು.

ಎರಡು ಅಧಿವೇಶನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೇರಳ ಕೊಟ್ಟಾಯಂ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಅಂಬೇಡ್ಕರ್ ಚೇರ್ ಪ್ರೊ.ಕೆ.ವಿಕ್ರಮನ್ ನಾಯರ್, ಬೆಂಗಳೂರು ಕೆಎಲ್‌ಇ ಕಾನೂನು ಕಾಲೇಜು ಪ್ರೊ.ಸಿ. ರಾಜಶೇಖರ ಆಗಮಿಸಿದ್ದರು. ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪ್ರೊ.ಕೆ.ಆರ್. ಐತಾಳ್, ಪ್ರೊ.ಸಿ. ರಾಜಶೇಖರ ಪಾಲ್ಗೊಂಡರು. ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಆರ್.ಬಿ. ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ದೇಶದ ವಿವಿಧ ಕಾನೂನು ಕಾಲೇಜುಗಳಿಂದ 20 ಅಧ್ಯಾಪಕರು ಹಾಗೂ 150 ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.