ADVERTISEMENT

ಐಪಿಎಲ್‌ನಲ್ಲಿ ಅವಕಾಶ ನೀಡುವ ಆಮಿಷ: ₹23.51 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 21 ಮೇ 2025, 13:28 IST
Last Updated 21 ಮೇ 2025, 13:28 IST
ಡಾ.ಭೀಮಾಶಂಕರ ಗುಳೇದ
ಡಾ.ಭೀಮಾಶಂಕರ ಗುಳೇದ   

ಬೆಳಗಾವಿ: ಐಪಿಎಲ್‌ನಲ್ಲಿ ಆಟವಾಡಲು ಅವಕಾಶ ನೀಡಲಾಗುವುದು, ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಯ್ಕೆ ಮಾಡಲಾಗುವುದು ಎಂದು ಆಮಿಷವೊಡ್ಡಿ ಯುವ ಕ್ರಿಕೆಟಿಗನಿಗೆ ₹23.51 ಲಕ್ಷ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. 

ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಚಿಂಚಲಿ ಗ್ರಾಮದ ರಾಕೇಶ ಯಡೂರೆ (19) ವಂಚನೆಗೆ ಒಳಗಾದವರು. ಕೆಎಸ್‌ಆರ್‌ಟಿಸಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿರುವ ರಾಕೇಶ ಅವರ ತಂದೆ ಭೀಮಪ್ಪ ಅವರು ಸಾಲ ಮಾಡಿ, ಚಿನ್ನಾಭರಣ ಮಾರಾಟ ಮಾಡಿ ಹಣ ನೀಡಿದ್ದಾರೆ.

ವಂಚಕರು 2024ರ ನವೆಂಬರ್‌ನಿಂದ 2025ರ ಏಪ್ರಿಲ್‌ವರೆಗೆ ಮೇಲಿಂದ ಮೇಲೆ ಸುಮಾರು 100ಕ್ಕೂ ಹೆಚ್ಚು ಬಾರಿ ಹಣ ಪಡೆದಿದ್ದಾರೆ. ಫೋನ್‌ ಪೇ, ಗೂಗಲ್‌ ಪೇ ಮತ್ತು ಅಕೌಂಟ್‌ ನಂಬರ್‌ ಮೂಲಕ ಕನಿಷ್ಠ ₹1,000ದಿಂದ ಹಿಡಿದು ₹55 ಸಾವಿರವರೆಗೂ ಪದೇಪದೇ ಹಣ ಹಾಕಿಸಿಕೊಂಡಿದ್ದಾರೆ. ವಿವಿಧ ಫಾರ್ಮ್‌ಗಳು, ಗುರುತಿನ ಚೀಟಿಗಳು, ಫೋಟೊಗಳ ನೆಪ ಹೇಳಿ ಹಣ ಪಡೆದಿದ್ದಾರೆ.

ADVERTISEMENT

ಇದು ವಂಚಕರ ಜಾಲ ಎಂದು ಅನುಮಾನ ಬಂದ ಬಳಿಕ ತಂದೆ– ಮಗ ಬೆಳಗಾವಿಯ ಸಿಇಎನ್‌ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

ಜಾಲ ಬೀಸಿದ್ದು ಹೇಗೆ?:

2024ರ ಮೇ ತಿಂಗಳಲ್ಲಿ ಹೈದರಾಬಾದ್‌‌ನಲ್ಲಿ ನಡೆದ ರೈಸಿಂಗ್ ಭಾರತ್ ಕ್ರಿಕೆಟ್ ಲೀಗ್ (ಆರ್‌ಬಿಸಿಎಲ್) ಟೂರ್ನಿಯ ಆಯ್ಕೆಯ ಟ್ರಯಲ್ಸ್‌ನಲ್ಲಿ ರಾಕೇಶ ಭಾಗಿಯಾಗಿದ್ದರು. ಆಲ್‌ರೌಂಡ್‌ ಆಟ ‍ಪ್ರದರ್ಶಿಸಿ ಗಮನ ಸೆಳೆದಿದ್ದರು.

ಬಳಿಕ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ರಾಕೇಶ ಸಂಪರ್ಕಿಸಿದ ವಂಚಕರು, ‘ನಿಮ್ಮ ಕ್ರಿಕೆಟ್‌ ಪ್ರದರ್ಶನ ತುಂಬ ಚೆನ್ನಾಗಿದೆ. ಆಯ್ಕೆಯಲ್ಲಿ ಸಾಕಷ್ಟು ರಾಜಕೀಯ ನಡೆಯುತ್ತದೆ. ನಮ್ಮ ಜತೆಗೆ ಬಂದರೆ ರಾಜಸ್ಥಾನ ರಾಯಲ್ಸ್‌ಗೆ ಸೇರಿಸುತ್ತೇವೆ’ ಎಂದು ಭರವಸೆ ನೀಡಿದ್ದರು.

‘ಅಸೋಸಿಯೇಷನ್‌ ಆಫ್‌ ಕ್ರಿಕೆಟ್‌’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ರಾಕೇಶ ಅವರ ಸಂಪರ್ಕ ಬೆಳೆಸಿದ್ದರು. ನಕಲಿ ಫಾರ್ಮ್‌ಗಳನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿ, ವಿವರ ಭರ್ತಿ ಮಾಡಿ ಕಳುಹಿಸುವಂತೆ ನಂಬಿಕೆ ಹುಟ್ಟಿಸಿದ್ದರು. ‘ಆಯ್ಕೆ ಮಾಡುವವರು ಹಣ ಕೇಳುತ್ತಿದ್ದಾರೆ, ನಿಮ್ಮ ಫೈಲ್‌ ಮುಂದಕ್ಕೆ ಹೋಗುತ್ತಿಲ್ಲ’ ಎಂಬ ನೆಪ ಹೇಳಿ ಪದೇಪದೇ ಹಣ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.