ಖಾನಾಪುರ: ಪಟ್ಟಣದ ಮಲಪ್ರಭಾ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಖಾನಾಪುರ ತಾಲ್ಲೂಕು ಕುಸ್ತಿ ಸಂಘಟನೆಯ ವತಿಯಿಂದ ಏರ್ಪಡಿಸಿದ್ದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಸ್ಥಳೀಯ ಮತ್ತು ಹೊರರಾಜ್ಯಗಳ ಒಟ್ಟು 55 ಜೊತೆ ಕುಸ್ತಿಪಟುಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದ ಜಗಜಟ್ಟಿಗಳ ನಡುವೆ ಹಣಾಹಣಿಯನ್ನು ವೀಕ್ಷಿಸಲು ಸಾವಿರಾರು ಕುಸ್ತಿರಸಿಕರು ಮಲಪ್ರಭಾ ಕ್ರೀಡಾಂಗಣದಲ್ಲಿ ನೆರೆದಿದ್ದರು. ಸಂಜೆ 4ಕ್ಕೆ ನಿಗದಿಯಾಗಿದ್ದ ಪಂದ್ಯಾವಳಿ ಮಳೆಯ ಕಾರಣ ಎರಡೂವರೆ ಗಂಟೆ ತಡವಾಗಿ ಆರಂಭಗೊಂಡಿತು.
ಮೊದಲ ಕ್ರಮಾಂಕದ ಸೆಣಸಾಟದಲ್ಲಿ ರಾಷ್ಟ್ರಮಟ್ಟದ ಕುಸ್ತಿಪಟುಗಳಾದ ಮಹಾರಾಷ್ಟ್ರದ ಪೃಥ್ವಿರಾಜ್ ಮೋಹೋಳ ಮತ್ತು ಹರಿಯಾಣದ ಸೋನುಕುಮಾರ ಅವರ ನಡುವೆ 13 ನಿಮಿಷಗಳ ತುರುಸಿನ ಸೆಣಸಾಟ ನಡೆಯಿತು. ಪೃಥ್ವಿರಾಜ್ 14ನೇ ನಿಮಿಷದಲ್ಲಿ ಸೋನುಕುಮಾರ ಅವರನ್ನು ಮಕಾಡೆ ಮಲಗಿಸುವ ಮೂಲಕ ವಿಜಯಿಯಾದರು.
ಎರಡನೇ ಕ್ರಮಾಂಕದ ಸೆಣಸಾಟ ಮಹಾರಾಷ್ಟ್ರದ ಶುಭಂ ಮತ್ತು ಹಿಮಾಚಲ ಪ್ರದೇಶದ ಪೈ.ಪವನಕುಮಾರ ಅವರ ನಡುವೆ ನಡೆಯಿತು. ಇಬ್ಬರ ನಡುವೆ ಸಮಬಲದ ಪ್ರದರ್ಶನ ನಡೆದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಮೂರನೇ ಕ್ರಮಾಂಕದ ಸೆಣಸಾಟದಲ್ಲಿ ಕರ್ನಾಟಕದ ಕಾರ್ತಿಕ ಮತ್ತು ಮಹಾರಾಷ್ಟ್ರ ಕೇಸರಿ ಸಂದೀಪ ಅವರ ನಡುವೆ ನಡೆದು ಸಂದೀಪ ಗಾಯಗೊಂಡ ಕಾರಣ ಪಂದ್ಯವನ್ನು ಡ್ರಾದಲ್ಲಿ ಮುಕ್ತಾಯಗೊಳಿಸಲಾಯಿತು.
ಶಾಸಕ ಹಲಗೇಕರ ಎರಡನೇ ಕ್ರಮಾಂಕದ ಕುಸ್ತಿಯ ನಿರ್ಣಾಯಕರಾಗಿ ಭಾಗವಹಿಸಿದ್ದು ಪಂದ್ಯಾವಳಿಯ ವಿಶೇಷವಾಗಿತ್ತು. ಅವರು ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕುಸ್ತಿ ಪಂದ್ಯಾವಳಿಯ ನಿರೂಪಕರಾಗಿ ಮಲ್ಲಪ್ಪ ಮಾರಿಹಾಳ, ಪ್ರಕಾಶ ಮಜಗಾವಿ ಮತ್ತು ಕೃಷ್ಣಾ ಚೌಗುಲೆ ಕಾರ್ಯನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.