ಬೆಳಗಾವಿ: ಜಿಲ್ಲೆಯಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ಕೊರತೆ ಇಲ್ಲ. ಅದರಲ್ಲೂ ಮಳೆಗಾಲ ಬಂದರೆ ಸಾಕು; ಜಲ ಸಮೃದ್ಧವಾದ ಸ್ಥಳಗಳಿಗೆ ಜನಸಾಗರವೇ ಹರಿದುಬರುತ್ತದೆ. ಏಳು ನದಿಗಳನ್ನು ಒಳಗೊಂಡ ಜಿಲ್ಲೆಯಲ್ಲಿ ಜಲಪಾತಗಳು, ಕಟ್ಟೆ– ಕೆರೆಗಳು, ಉದ್ಯಾನಗಳೂ ಸಾಕಷ್ಟಿವೆ. ಜತೆಗೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ಕಡೆಗಳಲ್ಲೂ ಪ್ರವಾಸಿ ತಾಣಗಳಿವೆ. ಹೀಗಾಗಿ ಪ್ರವಾಸೋದ್ಯಮ ಬೆಳವಣಿಗೆಗೆ ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿವೆ. ಆದರೆ, ಈಗಲೂ ಹಲವು ತಾಣಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲ. ಇದರಿಂದ ಪ್ರವಾಸೋದ್ಯಮವೂ ಬೆಳವಣಿಗೆ ಆಗಿಲ್ಲ.
ವಿಶ್ವಪ್ರಸಿದ್ಧ ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತಗಳೂ ಸೇರಿ ಗಡಿಗೆ ಹೊಂದಿಕೊಂಡ ಅಂಬೋಲಿ, ಕ್ಷೀರಸಾಗರ ಜಲಧಾರೆ ನೋಡಲು ಬರುವವರ ಸಂಖ್ಯೆ ದೊಡ್ಡದು. ಗೋಕಾಕ ಜಲಪಾತ ವೀಕ್ಷಣೆಗೆ ಆಗಮಿಸುವ ಸ್ಥಳೀಯ ಮತ್ತು ನೆರೆಯ ರಾಜ್ಯಗಳ ಪ್ರವಾಸಿಗರು ಮುಂಜಾಗ್ರತೆ ವಹಿಸುವ ಕುರಿತು ಹಾಕಿರುವ ಸೂಚನಾ ಫಲಕಗಳಲ್ಲಿನ ಮಾಹಿತಿಯನ್ನು ಪಾಲಿಸದೇ, ಮನಸೋ ಇಚ್ಛೆ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದು, ಸುರಕ್ಷತೆ ದೃಷ್ಟಿಯಿಂದ ನಿರ್ಬಂಧಿತ ಪ್ರದೇಶವನ್ನು ದಾಟದಂತೆ ಅಳವಡಿಸಲಾಗಿರುವ ರಕ್ಷಣಾ ಪರಿಕರಗಳನ್ನೂ ಕಿತ್ತೆಸೆಯುತ್ತಿರುವುದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರವಾಸಿಗರ ರಕ್ಷಣೆಗೆ ಯಾವುದೇ ಕಟ್ಟು-ನಿಟ್ಟಿನ ಕ್ರಮ ಇಲ್ಲವೇ ಮಳೆಗಾಲದ ಅವಧಿಯಲ್ಲಿ ವಿಶೇಷ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿರುವುದಿಲ್ಲ.
ಹುಕ್ಕೇರಿ ತಾಲ್ಲೂಕಿನಲ್ಲಿ ಮೂರು ನದಿಗಳು ಹರಿದರೂ ಘಟಪ್ರಭಾ ನದಿಗೆ ರಾಜಾ ಲಖಮಗೌಡ ಜಲಾಶಯ ಮತ್ತು ಮಾರ್ಕಂಡೇಯ ನದಿಗೆ ಶಿರೂರ್ ಬಳಿ ‘ಶಿರೂರ್ ಡ್ಯಾಂ’ ನಿರ್ಮಿಸಲಾಗಿದೆ. ಡ್ಯಾಂಗಳು ತುಂಬಿ ಕ್ರೆಸ್ಟ್ ಗೇಟ್ ತೆರೆದ ನಂತರ ಪ್ರವಾಸಿಗರು ನೋಡಲು ಆಗಮಿಸುತ್ತಾರೆ. ಯಾತ್ರಿಕರಿಗೆ ಇಳಿದುಕೊಳ್ಳಲು ಯಾತ್ರಿ ನಿವಾಸಿ ಸೌಲಭ್ಯ ಇಲ್ಲ. ಕ್ಯಾಂಟೀನಗಳಿಲ್ಲ. ಹಾಗಾಗಿ ಜನರು ವಸತಿ ಹುಡುಕುತ್ತ ಗೋಕಾಕ ಅಥವಾ ಬೆಳಗಾವಿ ಕಡೆ ಮುಖ ಮಾಡುವುದು ಅನಿವಾರ್ಯವಾಗಿದೆ.
ಇದೆಲ್ಲದರ ಆಚೆಗೂ ಪ್ರಚಾರಕ್ಕೆ ಬಾರದ ಹಲವು ಪ್ರವಾಸಿ ತಾಣಗಳು ಇವೆ. ಅವುಗಳ ವಿವರ ಇಲ್ಲಿದೆ.
ರಾಮದುರ್ಗ ತಾಲ್ಲೂಕಿನಲ್ಲಿ ಹಲವು ಕೊಳ್ಳಗಳು ಪ್ರವಾಸಿ ತಾಣಗಳಿವೆ. ರಾಮಭಕ್ತೆ ಶಬರಿಕೊಳ್ಳ ರಾಷ್ಟ್ರದ ಗಮನ ಸೆಳೆದಿದ್ದರೂ ಅಭಿವೃದ್ಧಿ ಕಂಡಿಲ್ಲ. ಮೂಲಸೌಲಭ್ಯಗಳು ಇಲ್ಲ.
ನೇಸರಗಿಯಿಂದ 7 ಕಿ.ಮೀ ದೂರದ ಪಶ್ಚಿಮ ಭಾಗದಲ್ಲಿರುವ ಹಣಬರಹಟ್ಟಿ ಗ್ರಾಮದ ರಾಮಲಿಂಗೇಶ್ವರ ಕ್ಷೇತ್ರದಲ್ಲಿ ರಾಮಚಂದ್ರ ವಿಶ್ರಾಂತಿ ಪಡೆಯಲು ತಂಗಿದ್ದನೆಂದು ಪ್ರತೀತಿ ಇದೆ. ಅನಾದಿ ಕಾಲದಿಂದಲೂ ಮನ ಸೆಳೆಯುವಂಥ ಪ್ರೇಕ್ಷಣೀಯ ಸ್ಥಳವಿದೆ. ಪ್ರಚಾರ ಸಿಗದ ಕಾರಣ ಯಾರ ಕಣ್ಣಿಗೂ ಬೀಳದೆ ಅನಾಥವಾಗಿದೆ. ಇಲ್ಲಿ ದೇವಸ್ಥಾನ ನಿರ್ಮಿಸಿ ಗುಡ್ಡ ಪ್ರದೇಶದಿಂದ ನಿರಂತರ ನೀರು ಬರುವ ನೀರನ್ನು ಹಿಡಿದು ಬೃಹತ್ ಈಜುಕೋಳ ನಿರ್ಮಿಸಲಾಗಿದೆ. ಇಲ್ಲಿ ಹಲವಾರು ಗವಿಗಳು ಕಂಡು ಬರುತ್ತವೆ. ಚಾರಣಕ್ಕೆ ಹೇಳಿ ಮಾಡಿಸಿದ ಜಾಗ. ಪ್ರವಾಸಿಗರಿಗೆ ₹1 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಿದ್ದರೂ ಉಪಯೋಗಿಸುತ್ತಿಲ್ಲ.
ಬೈಲಹೊಂಗಲ ಸಮೀಪದ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನ ಪ್ರಸಿದ್ಧವಾದುದು. ಇಲ್ಲಿನ ಜಲಪಾತಗಳೂ ನಯನ ಮನೋಹರ. ಜಲಪಾತದ ವೀಕ್ಷಣೆ ಮಾಡಿ ಸ್ನಾನ ಮಾಡುವ ಪ್ರಯಾಣಿಕರಿಗೆ ರಕ್ಷಣೆ, ಸುರಕ್ಷತೆ ಇಲ್ಲ. ಸದ್ಯ ಮಳೆಗಾಲ ಇರುವುದರಿಂದ ನಿತ್ಯ ನೂರಾರರು ಜನ ಪ್ರವಾಸಿಗರು ಜಲಪಾತಕ್ಕೆ ಲಗ್ಗೆ ಇಡುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಜಲಪಾತದ ವೀಕ್ಷಣಗೆ ಬರುವ ಪ್ರವಾಸಿಗರಿಗೆ ಅಗತ್ಯ ರಕ್ಷಣೆ, ಸುರಕ್ಷತೆ ಒದಗಿಸಬೇಕು ಎಂಬುದು ಜನರ ಆಗ್ರಹ.
ಚಿಕ್ಕೋಡಿ ತಾಲ್ಲೂಕಿನ ಉಮರಾಣಿ ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ ರಾಮಲಿಂಗ ದೇವಸ್ಥಾನ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ದೇವಸ್ಥಾನದ ಆವರಣದಲ್ಲಿ ಎಂದೂ ಬತ್ತದ 20 ಅಡಿ ಆಳದ ಬಾವಿ ಇದ್ದು, ರಾಮನು ಬಾಣ ಬಿಟ್ಟ ಹಿನ್ನೆಲೆಯಲ್ಲಿ ಈ ಬಾವಿ ಸೃಷ್ಠಿಯಾಗಿದೆ ಎಂಬ ಪ್ರತೀತಿ ಇದೆ. ದೇವಸ್ಥಾನದ ಸುತ್ತಲೂ ಗಿಡ ಮರಗಳಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಹೀಗಾಗಿ ಇಲ್ಲಿಗೆ ಶ್ರಾವಣ ಮಾಸ, ಶಿವರಾತ್ರಿ ಸೇರಿದಂತೆ ವಿವಿಧ ಹಬ್ಬ ಹರಿದಿನಗಳಲ್ಲಿ ಸಹಸ್ರಾರು ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಪ್ರವಾಸಿಗರಿಗೆ ಬೇಕಾದ ಯಾವ ಸೌಕರ್ಯಗಳೂ ಇಲ್ಲಿಲ್ಲ.
ಎಂ.ಕೆ.ಹುಬ್ಬಳ್ಳಿ ಬಳಿಯ ಮಲಪ್ರಭಾ ನದಿ ಮಧ್ಯದ ಜಗಜ್ಯೋತಿ ಬಸವೇಶ್ವರರ ಪತ್ನಿ ಶರಣೆ ಗಂಗಾಂಬಿಕಾ ಐಕ್ಯಸ್ಥಳದ ಸುತ್ತಲು ಮಲಪ್ರಭೆಯ ನೀರು ಆವರಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾ ಪಕ್ಕದಲ್ಲೇ ಇರುವ ಈ ಸ್ಥಳ ಪ್ರವಾಸಿಗರನ್ನು ಕೈಬಿಸಿ ಕರೆಯುವಂತೆ ಆಕರ್ಷಿಸುತ್ತಿದೆ. ಜನರಿಗೆ ಯಾವುದೇ ಸುರಕ್ಷತಾ ವ್ಯವಸ್ಥೆ ಇಲ್ಲಿಲ್ಲ. ಗಂಗಾಂಬಿಕಾ ಟ್ರಸ್ಟ್ ಕಮಿಟಿ ವತಿಯಿಂದ ಪ್ರವಾಸಿಗರ ಅನುಕೂಲಕ್ಕಾಗಿ ಶೌಚಗೃಹ, ಮೂತ್ರಿಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನದಿ ತೀರದ ಅಶ್ವತ್ಥ-ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿಯಲ್ಲಿಯು ಮಲಪ್ರಭೆ ಹರಿದಿದ್ದು, ಮಲಪ್ರಭಾ ನದಿ ತೀರದಲ್ಲಿ ಕಲ್ಲಿನ ಮೆಟ್ಟಿಲುಗಳಿವೆ. ಇಲ್ಲಿ ಅಭಿವೃದ್ಧಿ ಆಗಬೇಕಾದ ಕೆಲಸಗಳು ಸಾಕಷ್ಟು.
ಪ್ರಜಾವಾಣಿ ತಂಡ: ಪ್ರೊ.ಪಿ.ಜಿ. ಕೊಣ್ಣೂರ, ರಾಮೇಶ್ವರ ಕಲ್ಯಾಣಶೆಟ್ಟಿ, ಚನ್ನಪ್ಪ ಮಾದರ, ರವಿಕುಮಾರ ಹುಲಕುಂದ, ಪ್ರಸನ್ನ ಕುಲಕರ್ಣಿ, ಚಂದ್ರಶೇಖರ ಚಿನಕೇಕರ, ಬಸವರಾಜ ಶಿರಸಂಗಿ, ಚ.ಯ.ಮೆಣಸಿನಕಾಯಿ, ಶಿವಾನಂದ ವಿಭೂತಿಮಠ,
ಅಂಬೋಲಿ ದೂಧಸಾಗರ ಜಲಪಾತ ನೋಡಲು ಬೆಳಗಾವಿ ಮೂಲಕವೇ ಹೋಗಬೇಕು. ಆದರೆ ಸರಿಯಾದ ವಾಹನ ವ್ಯವಸ್ಥೆ ಇಲ್ಲ. ಸರ್ಕಾರ ಕೂಡಲೇ ಗಮನ ಹರಿಸಬೇಕು–ಉಮಾಶ್ರೀ ದೇವಾಂಗಮಠ ಪ್ರವಾಸಿ ಮಹಿಳೆ
ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕುರಿತು ಮಾಹಿತಿ ನೀಡುವ ಫಲಕ ಚಿತ್ರಗಳನ್ನು ಬಸ್‌ನಿಲ್ದಾಣ ರೈಲು ನಿಲ್ದಾಣ ನಗರದ ಮುಖ್ಯ ವೃತ್ತಗಳಲ್ಲಿ ಅಳವಡಿಸಿದರೆ ಅನುಕೂಲ–ಪಾಯಲ್ ಡಿ. ಪ್ರವಾಸಿ ಮಹಿಳೆ ಗೋವಾ
ಗೋಕಾಕ ಪ್ರವಾಸಿ ತಾಣಗಳಲ್ಲಿ ಹೋಟೆಲ್‌ಗಳಲ್ಲಿ ಶುಚಿಯಾದ ಊಟ ಸಿಗುವುದಿಲ್ಲ. ಮಾರ್ಗದರ್ಶಿಗಳೂ ಇಲ್ಲ. ಗೊತ್ತಿಲ್ಲದೇ ಕೆಲವರು ಅಪಾಯಕ್ಕೆ ಒಳಗಾಗಿದ್ದಾರೆ.–ಚನ್ನವೀರ ಖಾನಾಪುರ ಗೋಕಾಕ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.