ADVERTISEMENT

ಮುಖ್ಯಮಂತ್ರಿ ಬದಲಿಸುವ ಪ್ರಶ್ನೆಯೇ ಇಲ್ಲ: ಸಚಿವ ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 5:39 IST
Last Updated 5 ಫೆಬ್ರುವರಿ 2025, 5:39 IST
ಕೆ.ಎಚ್‌. ಮುನಿಯಪ್ಪ
ಕೆ.ಎಚ್‌. ಮುನಿಯಪ್ಪ   

ಬೆಳಗಾವಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರನ್ನು ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.​​ಮುನಿಯಪ್ಪ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ವಿಷಯ ಬಂದಾಗ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ, ಈಗ ಅಂಥ ಯಾವುದೇ ಪರಿಸ್ಥಿತಿ ಇಲ್ಲ’ ಎಂದರು.

‘ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದು, ಸರ್ಕಾರದಿಂದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮುಖ್ಯಮಂತ್ರಿ ಶೀಘ್ರದಲ್ಲೇ ಉತ್ತಮ ಬಜೆಟ್ ಕೂಡ ನೀಡಲಿದ್ದಾರೆ. ಹಾಗಾಗಿ ಅವರನ್ನು ಬದಲಾಯಿಸುವ ಪ್ರಶ್ನೆಯೇ ಉದ್ಭವಿಸದು’ ಎಂದು ಪುನರುಚ್ಚರಿಸಿದರು.

ADVERTISEMENT

ಕೆಲವು ಸಚಿವರು ಮತ್ತು ಶಾಸಕರು ನವದೆಹಲಿಗೆ ಹೋಗಿ ಕಾಂಗ್ರೆಸ್‌ ಹೈಕಮಾಂಡ್ ಭೇಟಿಯಾಗಿ ಮುಖ್ಯಮಂತ್ರಿ ಬದಲಾಯಿಸುವಂತೆ ಒತ್ತಾಯಿಸಲು ಹೋಗುತ್ತಿರುವ ಕುರಿತ ಪ್ರಶ್ನೆಗೆ, ‘ಆ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಯಾರೂ ನನ್ನೊಂದಿಗೆ ಚರ್ಚಿಸಿಲ್ಲ’ ಎಂದರು.

‘ತೂಕದಲ್ಲಿ ರೈತರಿಗೆ ಆಗುತ್ತಿರುವ ವಂಚನೆ ತಡೆಯಲು, ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಎಪಿಎಂಸಿ ಮೂಲಕ ಪ್ರತ್ಯೇಕ ತೂಕದ ಯಂತ್ರಗಳನ್ನು ಅಳವಡಿಸಲಾಗುವುದು. ಮುಖ್ಯಮಂತ್ರಿ ಇದಕ್ಕಾಗಿ ಹಣ ಬಿಡುಗಡೆ ಮಾಡಿದ್ದಾರೆ.  ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ತೂಕದಲ್ಲಿ ಮೋಸ ಮಾಡುತ್ತಿರುವವರಿಗೆ ಈಗಾಗಲೇ ದಂಡ,  ಶಿಕ್ಷೆ ವಿಧಿಸುತ್ತಿದ್ದೇವೆ. ಕಾನೂನು ಮಾಪನಶಾಸ್ತ್ರ ಇಲಾಖೆಯು ಈ ಬಗ್ಗೆ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.