ADVERTISEMENT

ಸ್ಮಶಾನಕ್ಕೆ ದಾರಿ ಇಲ್ಲದೆ ತೊಂದರೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 7:25 IST
Last Updated 26 ಸೆಪ್ಟೆಂಬರ್ 2020, 7:25 IST
ಮೋಳೆ ಗ್ರಾಮದ ಸ್ಮಶಾನದ ಚಿತಾಗಾರದ ರಸ್ತೆಯಲ್ಲಿ ಮುಳ್ಳಿನ ಗಿಡಗಳು ಬೆಳೆದಿವೆ
ಮೋಳೆ ಗ್ರಾಮದ ಸ್ಮಶಾನದ ಚಿತಾಗಾರದ ರಸ್ತೆಯಲ್ಲಿ ಮುಳ್ಳಿನ ಗಿಡಗಳು ಬೆಳೆದಿವೆ   

ಮೋಳೆ: ಗ್ರಾಮದ ಹಳ್ಳದ ಸಮೀಪದಲ್ಲಿರುವ ಸ್ಮಶಾನಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಮುಳ್ಳಿನ ಗಿಡಗಳ ನಡುವಿನ ಕಾಲು ಹಾದಿಯಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ. ಮಳೆ ಬಂದಾಗ ಈ ಪ್ರದೇಶ ಕೆಸರು ಗದ್ದೆಯಂತಾಗುತ್ತದೆ. ಅದರಲ್ಲೇ ಸರ್ಕಸ್‌ ಮಾಡುತ್ತಾ ಓಡಾಡಬೇಕಿದೆ.

15ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಅನೇಕ ಸಮುದಾಯದವರು ಈ ಸ್ಮಶಾನ ಅವಲಂಬಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಮಳೆಯಿಂದ ರಕ್ಷಣೆಗೆ ಶೆಡ್‌ ನಿರ್ಮಿಸಿರುವುದು ಬಿಟ್ಟರೆ ಬೇರಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಗ್ರಾಮ ಪಂಚಾಯಿತಿಯವರು ಕನಿಷ್ಠ ಸ್ವಚ್ಛತೆಯ ಕಡೆಗೂ ಗಮನಹರಿಸಿಲ್ಲದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಒಂದು ವೇಳೆ, ರಾತ್ರಿ ಸಮಯದಲ್ಲಿ ಅಂತ್ಯಕ್ರಿಯೆ ನಡೆಸಬೇಕಾದರೆ ಬೆಳಕಿನ ವ್ಯವಸ್ಥೆಯೂ ಇಲ್ಲಿಲ್ಲ. ಶವ ಹೊತ್ತವರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಿ ಬರಬೇಕಾಗಿದೆ. ಸಮೀಪದಲ್ಲೇ ಸ್ಥಳೀಯರು ಮಲ ವಿಸರ್ಜನೆ ಮಾಡುವುದರಿಂದ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ಅಂತ್ಯಕ್ರಿಯೆಗೆ ಬಂದವರು ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಇಲ್ಲಿನ ಅವ್ಯವ್ಥೆಯು, ಮೃತರಾದವರಿಗೆ ಗೌರವದ ವಿದಾಯ ಹೇಳುವ ಕಾರ್ಯಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.

‘ಸಂಬಂಧಿಸಿದವರು ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಸ್ಮಶಾನ ಅಭಿವೃದ್ಧಿಪಡಿಸಬೇಕು. ನೀರು ಹಾಗೂ ವಿದ್ಯುತ್‌ ದೀಪದ ವ್ಯವವ್ಥೆ ಕಲ್ಪಿಸಬೇಕು. ಕಾಂಪೌಂಡ್‌ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು’ ಎನ್ನುವುದು ಜನರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.