ADVERTISEMENT

‘ರಕ್ತಕ್ಕೆ ಪರ್ಯಾಯವಿಲ್ಲ, ದಾನ ಮಾಡಿ’

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 12:18 IST
Last Updated 14 ಜೂನ್ 2019, 12:18 IST
ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ರಕ್ತ ಭಂಡಾರದಲ್ಲಿ ಶುಕ್ರವಾರ ವಿಶ್ವ ರಕ್ತದಾನ ದಿನಾಚರಣೆಗೆ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು
ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ರಕ್ತ ಭಂಡಾರದಲ್ಲಿ ಶುಕ್ರವಾರ ವಿಶ್ವ ರಕ್ತದಾನ ದಿನಾಚರಣೆಗೆ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು   

ಬೆಳಗಾವಿ: ‘ರಕ್ತಕ್ಕೆ ಪರ್ಯಾಯ ಎನ್ನುವುದಿಲ್ಲ. ಹೀಗಾಗಿ, ದಾನಗಳಲ್ಲಿ ರಕ್ತ ದಾನ ಶ್ರೇಷ್ಠವಾಗಿದೆ ’ಎಂದು ಹಿರಿಯ ವೈದ್ಯ ಡಾ.ಎಚ್‌.ಬಿ. ರಾಜಶೇಖರ ತಿಳಿಸಿದರು.

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ರಕ್ತ ಭಂಡಾರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರಕ್ತದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದು ನಮ್ಮ ವೈದ್ಯ ವಿಜ್ಞಾನವು ಬಹಳಷ್ಟು ಪ್ರಗತಿ ಸಾಧಿಸಿದೆ. ನಮ್ಮ ಶರೀರದಲ್ಲಿರುವ ಯಾವುದೇ ಅಂಗವನ್ನು ಕೃತಕವಾಗಿ ಅಥವಾ ಕಸಿ ವಿಧಾನದಿಂದ ಮರುಜೋಡಿಸಬಹುದಾಗಿದೆ. ಆದರೆ ರಕ್ತವು ಒಂದು ವಿಶಿಷ್ಟ ಗುಣವನ್ನು ಹೊಂದಿದ್ದು ಇದನ್ನು ಯಾವುದೇ ರೀತಿಯ ವಿಧಾನಗಳಿಂದ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ, ಆರೋಗ್ಯವಂತರಾದ ಎಲ್ಲರೂ ರಕ್ತ ದಾನ ಮಾಡಿ ಇನ್ನೊಂದು ಜೀವ ಉಳಿಸಲು ಕಾರಣವಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಮಾತನಾಡಿ, ‘ಅಪಘಾತ, ಹೆರಿಗೆ, ಥಲೆಸಿಮಿಯಾ ಹಾಗೂ ಶಸ್ತ್ರಚಿಕಿತ್ಸೆ ಮುಂತಾದ ಸಮಸ್ಯೆಗಳಿಂದ ದೇಶದಲ್ಲಿ ಪ್ರತಿ ನಿಮಿಷಕ್ಕೆ ಇಬ್ಬರು ಸಾವಿಗೀಡಾಗುತ್ತಿದ್ದಾರೆ. ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ಅರ್ಹ ವ್ಯಕ್ತಿ ರಕ್ತದಾನ ಮಾಡಿದರೆ ಇಂತಹ ಸಾವು– ನೋವುಗಳನ್ನು ತಡೆಯಬಹುದಾಗಿದೆ’ ಎಂದು ತಿಳಿಸಿದರು.

ಹಿರಿಯ ವೈದ್ಯ ಡಾ.ಬಿ.ಎಸ್. ಮಹಾಂತಶೆಟ್ಟಿ, ಹಿರಿಯ ಶಸ್ತ್ರಚಿಕಿತ್ಸಜ್ಞ ಡಾ.ಅಶೋಕ ಪಾಂಗಿ, ಡಾ.ಅಶೋಕ ಅಲತಗಿ, ರಕ್ತ ಭಂಡಾರ ಅಧಿಕಾರಿ ಡಾ.ವಸಂತ ಶಿಂಧೆ ಇದ್ದರು.

25 ಮಂದಿ ರಕ್ತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.