ADVERTISEMENT

ಚುನಾವಣೆ ಕೆಲಸದ ವೇಳೆ ಬೀನ್ಸ್‌ ಮುರಿಯುತ್ತಿದ್ದರು!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 11:55 IST
Last Updated 21 ಏಪ್ರಿಲ್ 2019, 11:55 IST
ಚುನಾವಣೆ ಕೆಲಸ ಬಿಟ್ಟು ಬೀನ್ಸ್‌ನ ನಾರು ತೆಗೆದು ಮುರಿಯುತ್ತಿದ್ದ ಸಿಬ್ಬಂದಿ.
ಚುನಾವಣೆ ಕೆಲಸ ಬಿಟ್ಟು ಬೀನ್ಸ್‌ನ ನಾರು ತೆಗೆದು ಮುರಿಯುತ್ತಿದ್ದ ಸಿಬ್ಬಂದಿ.   

ಬೆಳಗಾವಿ: ಇಲ್ಲಿನ ರಿಸಾಲ್ದಾರ್‌ ಗಲ್ಲಿಯಲ್ಲಿರುವ ನಗರಪಾಲಿಕೆಯ ಹಳೆಯ ಕಚೇರಿಯಲ್ಲಿನ ಚುನಾವಣಾ ವಿಭಾಗದ ಸಿಬ್ಬಂದಿ, ಚುನಾವಣೆ ಕೆಲಸ ಬಿಟ್ಟು ಬೀನ್ಸ್‌ನ ನಾರು ತೆಗೆದು ಮುರಿಯುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರೇಖಾ ಸೂಳಿಕೇರಿ ಎನ್ನುವವರು, ಮಹಿಳಾ ಸಿಬ್ಬಂದಿಯು ಬೀನ್ಸ್‌ ಮುರಿಯುತ್ತಿದ್ದ ಫೋಟೊಗಳನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಸಿಬ್ಬಂದಿ ವಿರುದ್ಧ ಆರೋಪ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.

‘ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಸೇರಿಸಲು ಮಾರ್ಚ್‌ 1ರಂದು ಹಳೆಯ ಪಾಲಿಕೆ ಕಚೇರಿಯಲ್ಲಿ ಅರ್ಜಿ ಕೊಟ್ಟಿದ್ದೆ. ಆದರೆ, ಪಟ್ಟಿ ಪರೀಕ್ಷಿಸಿದಾಗ ಹೆಸರು ಕಾಣಿಸಲಿಲ್ಲ. ಈ ಕುರಿತು ಶನಿವಾರ ವಿಚಾರಿಸಲು ಹೋದಾಗ ಅಲ್ಲಿನ ಸಿಬ್ಬಂದಿ ಸರಿಯಾಗಿ ಸ್ಪಂದಿಸಲಿಲ್ಲ. ಕಚೇರಿ ಕೆಲಸದ ಅವಧಿಯಲ್ಲಿ ತರಕಾರಿ ಸ್ವಚ್ಛಗೊಳಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಅಲ್ಲದೇ, ಹೊಸ ಪಾಲಿಕೆ ಕಚೇರಿಗೆ ಹೋಗಿ ಎಂದು ನಮ್ಮ ದಾರಿ ತಪ್ಪಿಸಿದರು. ಬೇಜವಾಬ್ದಾರಿ ಹಾಗೂ ದರ್ಪದಿಂದ ವರ್ತಿಸಿದರು’ ಎಂದು ಅನುಭವ ಬರೆದುಕೊಂಡಿದ್ದಾರೆ.

ADVERTISEMENT

‘ಅರ್ಹ ಮತದಾರಳಾದ ನಾನು ‍ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಮತ ಚಲಾಯಿಸುವುದು ಹೇಗೆ? ಅರ್ಜಿ ಕೊಟ್ಟಿದ್ದರೂ ಹೆಸರು ಸೇರ್ಪಡೆ ಮಾಡದಿರುವುದು ಏಕೆ? ಹೆಸರು ಅಪ್‌ಡೇಟ್ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳು ನೆರವಾಗಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.