ADVERTISEMENT

ಬಡಾಲ ಅಂಕಲಗಿ: ಅಮಾವಾಸ್ಯೆ ಮುಗಿಯಲೆಂದು ಕಾದಿದ್ದರು!

ಎಂ.ಮಹೇಶ
Published 7 ಅಕ್ಟೋಬರ್ 2021, 13:12 IST
Last Updated 7 ಅಕ್ಟೋಬರ್ 2021, 13:12 IST
ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿಯಲ್ಲಿ ಮನೆಯ ಗೋಡೆ ಕುಸಿದಿದ್ದರಿಂದ ಏಳು ಮಂದಿ ಸಾವಿಗೀಡಾದ ಸ್ಥಳಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿಯಲ್ಲಿ ಮನೆಯ ಗೋಡೆ ಕುಸಿದಿದ್ದರಿಂದ ಏಳು ಮಂದಿ ಸಾವಿಗೀಡಾದ ಸ್ಥಳಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ದುರಂತದ ಕಥೆ ಹೇಳುತ್ತಿದ್ದ ಅವಶೇಷಗಳು. ಅಲ್ಲಿದ್ದವರೆಲ್ಲರ ಮೊಗದಲ್ಲೂ ದುಗುಡ–ದುಃಖ. ಸಂಬಂಧಿಕರ ಆಕ್ರಂದನ. ತಮ್ಮವರನ್ನು ಕಳೆದುಕೊಂಡವರಿಗೆ ಧೈರ್ಯ ತುಂಬುವುದು ಹೇಗೆ ಎನ್ನುವ ಅಸಹಾಯಕತೆ... ಇದೆಲ್ಲವೂ ಕಂಡುಬಂದಿದ್ದ ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ.

ಬುಧವಾರ ಸಂಜೆ ಭಾರಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ 6 ಮಂದಿ ಹಾಗೂ ಎದುರಿನ ಮನೆಯ ಬಾಲಕಿ ಸಾವಿಗೀಡಾದ ಘಟನೆಯು ಗ್ರಾಮವನ್ನು ಸ್ಮಶಾನ ಮೌನಕ್ಕೆ ದೂಡಿದೆ. ಎಲ್ಲೆಲ್ಲೂ ಆತಂಕದ ಛಾಯೆ ಆವರಿಸಿದೆ.

ಶಿಥಿಲಗೊಂಡಿದ್ದರಿಂದಾಗಿ, ಮನೆಯನ್ನು ನೆಲಸಮಗೊಳಿಸಿ ಹೊಸದಾಗಿ ಕಟ್ಟುವುದಕ್ಕಾಗಿ ಖನಗಾಂವಿ ಕುಟುಂಬದವರು ಪಕ್ಕದಲ್ಲೇ ತಡಗಿನ ಶೆಡ್ ಹಾಕಿಕೊಂಡು ವಾಸವಿದ್ದರು. ಬುಧವಾರದಿಂದ ಕಾಮಗಾರಿ ಆರಂಭಿಸುವ ಉದ್ದೇಶ ಅವರದಾಗಿತ್ತು. ಜೆಸಿಬಿಯವರೊಂದಿಗೂ ಮಾತನಾಡಿದ್ದರು. ಆದರೆ, ಮಹಾಲಯ ಅಮಾವಾಸ್ಯೆ ಎಂಬ ಕಾರಣಕ್ಕೆ ಗುರುವಾರಕ್ಕೆ ಮುಂದೂಡಿದ್ದರು.

ADVERTISEMENT

ಜೋರು ಮಳೆಯಾಗುತ್ತಿದ್ದ ವೇಳೆ, ಅಡ್ಡ ಗೋಡೆಯೊಂದು ಕುಸಿದುಬಿದ್ದಿದೆ. ಅದನ್ನು ನೋಡುವುದಕ್ಕೆ ಮನೆಯವರು ಹೋಗಿದ್ದಾಗ, ದೊಡ್ಡ ಗೋಡೆಯೊಂದು ಅವರ ಮೇಲೆ ಬಿದ್ದಿದೆ. ಇದರಿಂದಾಗಿ ಅವರಲ್ಲಿ ಐವರು ಜೀವಂತ ಸಮಾಧಿಯಾಗಿದ್ದಾರೆ. ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾರೆ. ಆ ಕುಟುಂಬದ ಹಿರಿಯ ಭೀಮಪ್ಪ ಅಂಗಡಿಗೆ ಹೋಗಿದ್ದರಿಂದಾಗಿ ಅಪಾಯದಿಂದ ಪಾರಾಗಿದ್ದಾರೆ.

ಇಡೀ ಕುಟುಂಬವೇ ಹೋಯ್ತು

‘ಘಟಸ್ಥಾಪನೆ ಪೂಜೆಗಾಗಿ ಸಾಮಗ್ರಿಗಳನ್ನು ತರುವುದಕ್ಕಾಗಿ ಅಂಗಡಿಗೆ ಹೋಗಿದ್ದೆ. ಬಂದು ನೋಡಿದಾಗ ಗೋಡೆ ಬೀಳುತ್ತಿರುವುದು ಗಮನಕ್ಕೆ ಬಂದಿತು. ಅಷ್ಟರಲ್ಲಿ ಕುಟುಂಬದವರೆಲ್ಲರೂ ಅದರಲ್ಲಿ ಸಿಲುಕಿದ್ದರು. ಚೀರಾಡಿದೆ. ಆದರೆ, ನಮ್ಮವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ನನ್ನ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದರು. ಇಡೀ ಕುಟುಂಬವೇ ಹೊರಟು ಹೋಯಿತು’ ಎಂದು ಮನೆಯ ಯಜಮಾನ ಭೀಮಪ್ಪ ಖನಗಾಂವಿ ಕಣ್ಣೀರಾದರು.

‘ಸಂಜೆ 7ರ ಸುಮಾರಿಗೆ ಊಟ ಮಾಡುತ್ತಿದ್ದೆವು. ಜೋರು ಶಬ್ದ ಬಂತು. ಹೋಗಿ ನೋಡಿದಾಗ ಇಡೀ ಮನೆಯವರ ಮೇಲೆ ಗೋಡೆ ಬಿದ್ದಿತ್ತು. ಆ ಕುಟುಂಬದವರು ಯಾರಿಗೂ ತೊಂದರೆ ಕೊಟ್ಟವರಲ್ಲ. ತಾವಾಯಿತು ತಮ್ಮ ಕೆಲಸವಾಯಿತೆಂದು ಇರುತ್ತಿದ್ದರು. ಜಮೀನಿನಲ್ಲಿ ದುಡಿಯುತ್ತಿದ್ದರು. ಮನೆಯನ್ನು ಹೊಸದಾಗಿ ಕಟ್ಟುವುದಕ್ಕಾಗಿ ಚಾವಣಿ ಬಿಚ್ಚಿದ್ದರು. ಗುರುವಾರ ಕೆಲಸ ಆರಂಭಿಸಲು ಉದ್ದೇಶಿಸಿದ್ದರು. ಅಷ್ಟರೊಳಗೆ ಈ ದುರ್ಘಟನೆ ನಡೆದು ಹೋಗಿದೆ’ ಎಂದು ಬಸವಣ್ಣೆಪ್ಪ ರಾಮಣ್ಣವರ ಹಾಗೂ ಸ್ಥಳೀಯರು ತಿಳಿಸಿದರು.

ಅಮಾವಾಸ್ಯೆ ಕಾರಣದಿಂದ ಹೋಗಿರಲಿಲ್ಲ!

‘ಭೀಮಪ್ಪ ಅವರ ಮಗಳು ಸವಿತಾ ಗಣೇಶ ಹಬ್ಬಕ್ಕೆಂದು ತವರಿಗೆ ಬಂದಿದ್ದರು. ಕೊಲ್ಹಾಪುರದಲ್ಲಿ ಕೆಲಸ ಮಾಡುತ್ತಿದ್ದ ಪತಿ ಕರೆದೊಯ್ಯಲು ಬುಧವಾರ ಬಂದಿದ್ದರು. ‘ಅಮಾವಾಸ್ಯೆ ದಿನ ಬೇಡ, ಇನ್ನೊಮ್ಮೆ ಕರೆದುಕೊಂಡು ಹೋಗುವಿರಂತೆ’ ಎಂದು ಭೀಮಪ್ಪ ಕುಟುಂಬದವರು ಅಳಿಯನಿಗೆ ತಿಳಿಸಿದ್ದರಂತೆ. ಹೀಗಾಗಿ, ಸವಿತಾ ಇಲ್ಲೇ ಉಳಿದಿದ್ದರು’ ಎಂದು ನೆರೆಮನೆಯವರು ತಿಳಿಸಿದರು.

‘ಟ್ಯೂಷನ್‌ಗೆ ಕಳುಹಿಸಿದಿದ್ದರೆ...’

ಘಟನೆಯಲ್ಲಿ ಮೃತಪಟ್ಟ ಬಾಲಕಿ ಕಾಶವ್ವ ಕೊಳೆಪ್ಪನವರ, ಸ್ನೇಹಿತೆ ಪೂಜಾಳನ್ನು ನೋಡಲು ಹೋಗಿ ದುರಂತದಲ್ಲಿ ಸಾವಿಗೀಡಾಗಿದ್ದಾಳೆ. ಖನಗಾಂವಿ ಕುಟುಂಬದವರು, ಗೋಡೆ ಬಿದ್ದಿದ್ದನ್ನು ಟಾರ್ಚ್‌ ಬೆಳಕಲ್ಲಿ ವೀಕ್ಷಿಸುತ್ತಿದ್ದುದ್ದನ್ನು ನೋಡಲು ಆಕೆ ಹೋಗಿದ್ದಳು. ಆಗ, ಗೋಡೆ ಕುಸಿತದ ರೂಪದಲ್ಲಿ ಬಂದಜವರಾಯ ಆಕೆಯ ಪ್ರಾಣಪಕ್ಷಿಯನ್ನೂ ಹೊತ್ತೊಯ್ದಿದ್ದಾನೆ.

ಗೋಡೆಯ ಅವಶೇಷಗಳಡಿ ಸಿಲುಕಿದ್ದವರನ್ನು ಹೊರ ತೆಗೆಯುವ ಕಾರ್ಯದಲ್ಲಿ ತೊಡಗಿದ್ದ ವಿಠ್ಠಲ ಕೊಳೆಪ್ಪನವರ ಅವರಿಗೆ ತನ್ನ ಮಗಳು ಕಾಶವ್ವ ಕೂಡ ಅಲ್ಲಿ ಸಿಲುಕಿರುವುದು ನಂತರಷ್ಟೆ ಗೊತ್ತಾಗಿದೆ!

‘ಮಗಳನ್ನು ನಿತ್ಯ ಸಂಜೆ ನಾಗೇರಾಳ ಗ್ರಾಮಕ್ಕೆ ಟ್ಯೂಷನ್‌ಗೆ ಕರೆದುಕೊಂಡು ಹೋಗುತ್ತಿದ್ದೆ. ಗುರುವಾರವೂ ಕರೆದೊಯ್ಯುವಂತೆ ಮಗಳು ಕಾಶವ್ವ ಕೇಳಿದ್ದಳು. ಜೋರು ಮಳೆ ಬರುತ್ತಿದ್ದುದ್ದರಿಂದ ಬೇಡವೆಂದು ಸುಮ್ಮನಿರಿಸಿದ್ದೆ. ಟ್ಯೂಷನ್‌ಗೆ ಕರೆದೊಯ್ದಿದ್ದರೆ ಮಗಳು ಬದುಕುತ್ತಿದ್ದಳೇನೋ. ಆಕೆಯೂ ಗೋಡೆಯೊಳಗೆ ಸಿಲುಕಿದ್ದು ನನಗೇ ಗೊತ್ತಿರಲಿಲ್ಲ. ಬೇರೆಯವರು ಜಗುಲಿಯ ಮೇಲೆ ತಂದು ಮಲಗಿಸಿದ್ದರು. ನಾನು ಇತರರಿಗೆ ನೀರು ಹಾಕಿ ಎಚ್ಚರಿಸುತ್ತಿದ್ದೆ’ ಎಂದು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.