ಚನ್ನಮ್ಮನ ಕಿತ್ತೂರು: ರಾಷ್ಟ್ರೀಯ ಹೆದ್ದಾರಿ ಬದಿಗಿರುವ ತಾಲ್ಲೂಕಿನ ತಿಮ್ಮಾಪುರದಿಂದ ಬಸಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಹೊಂಡ ಬಿದ್ದ ರಸ್ತೆಯಲ್ಲಿ ಸಂಗ್ರಹಗೊಂಡಿರುವ ನೀರಿನಿಂದಾಗಿ ಅಲ್ಲಲ್ಲಿ ರಸ್ತೆಯೇ ಕಾಣದಂತಾಗಿದೆ.
‘ಈ ಪ್ರದೇಶಕ್ಕೆ ಹೊಸಬರು ಈ ರಸ್ತೆ ಮೂಲಕ ಸಂಚರಿಸಿದರೆ ವಾಹನ ಕೆಡವಿಕೊಂಡು ಪೆಟ್ಟು ತಗುಲಿಸಿಕೊಳ್ಳುತ್ತಾನೆ. ಅಷ್ಟೊಂದು ಪ್ರಮಾಣದಲ್ಲಿ ರಸ್ತೆ ಹದಗೆಟ್ಟು ಹೋಗಿದೆ’ ಎಂದು ದೂರುತ್ತಾರೆ ಗ್ರಾಮಸ್ಥರು.
‘ಕಾಮಗಾರಿ ಮುಗಿದು ಒಂದು ವರ್ಷದಲ್ಲಿಯೇ ಈ ರಸ್ತೆ ಕೆಟ್ಟು ಹೋಯಿತು. ಡಾಂಬರೀಕರಣಗೊಂಡಿದ್ದ ರಸ್ತೆಯಲ್ಲಿ ಅಲ್ಲಲ್ಲಿ ತಗ್ಗು ಬಿದ್ದವು. ಹಾಕಿದ ಖಡಿಕಲ್ಲುಗಳು ಮೇಲೆದ್ದು ವಾಹನದ ರಭಸಕ್ಕೆ ಆಚೀಚೆ ಸಿಡಿಯಲು ಪ್ರಾರಂಭಿಸಿದವು. ಕಾಮಗಾರಿಯ ಗುಣಮಟ್ಟ ಪರೀಕ್ಷೆ ಮಾಡದ ಅಧಿಕಾರಿಗಳಿಂದ ನಮ್ಮೂರ ರಸ್ತೆ ಪಾಡು ಹೀಗಾಯಿತು’ ಎಂದು ಗ್ರಾಮಸ್ಥ ಬಸವರಾಜ ಭೀಮರಾಣಿ ದೂರಿದರು.
‘ಕೆಟ್ಟಿರುವ ರಸ್ತೆ ಪರಿಸ್ಥಿತಿಯನ್ನು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಗುತ್ತಿಗೆದಾರ ಈ ರಸ್ತೆಯನ್ನು ಐದು ವರ್ಷ ನಿರ್ವಹಣೆ ಮಾಡುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು. ವರ್ಷದ ಅವಧಿಯಲ್ಲಿ ರಸ್ತೆ ಕೆಟ್ಟು ಹೋಗಿದ್ದರೂ ನೋಡಲಿಲ್ಲ. ಕೆಟ್ಟ ರಸ್ತೆಗೆ ಈಗ ಭರ್ತಿ ನಾಲ್ಕು ವರ್ಷ ತುಂಬಿವೆ. ಇನ್ನೂ ತಿರುಗಿ ನೋಡದ ಅಧಿಕಾರಿಗಳ ಕ್ರಮದಿಂದಾಗಿ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ’ ಎಂದರು.
‘ಮಳೆಗಾಲ ಪ್ರಾರಂಭವಾಗಿದೆ. ರಸ್ತೆ ಮಧ್ಯೆ ಬಿದ್ದಿದ್ದ ಚಿಕ್ಕ ತಗ್ಗುಗಳು ಹೊಂಡದ ಆಕಾರ ಪಡೆದುಕೊಂಡಿವೆ. ಮಳೆ ನೀರು ಅಧಿಕ ಪ್ರಮಾಣದಲ್ಲಿ ಸಂಗ್ರಹಗೊಂಡು ಬೈಕ್ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಅಮಾಯಕರು ಬಿದ್ದು ಪೆಟ್ಟು ತಗುಲಿಸಿಕೊಂಡರೆ ಇದಕ್ಕೆ ಗುತ್ತಿಗೆದಾರ ಹೊಣೆಯಾಗುತ್ತಾರೋ ಅಥವಾ ಕಾಮಗಾರಿ ಉಸ್ತುವಾರಿ ನೋಡಿಕೊಂಡ ಇಲಾಖೆ ಹೊಣೆಯಾಗುತ್ತದೋ’ ಎಂದು ಅವರು ಕೇಳಿದರು.
‘ಜನಪ್ರತಿನಿಧಿ, ಅಧಿಕಾರಿ ಅಥವಾ ಗುತ್ತಿಗೆದಾರ ಆಗಲಿ, ರಸ್ತೆ ಗುಂಡಿ ತುಂಬಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು’ ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ಸಂಚಾಲಕ ಜಗದೀಶ ಕಡೋಲಿ ಆಗ್ರಹಿಸಿದರು.
ಗುತ್ತಿಗೆದಾರನ ನಿರ್ವಹಣೆಯಲ್ಲಿದ್ದರೂ ಕೆಟ್ಟ ರಸ್ತೆಯನ್ನು ಸುಧಾರಣೆ ಮಾಡಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಹಿರಿಯ ಅಧಿಕಾರಿಗಳು ಕಣ್ತೆರೆದು ನೋಡಿ ಸುಧಾರಣೆಗೆ ಮುಂದಾಗಬೇಕಿದೆ–ಬಸವರಾಜ ಭೀಮರಾಣಿ ಗ್ರಾಮಸ್ಥ ಬಸಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.