ADVERTISEMENT

ಚನ್ನಮ್ಮನ ಕಿತ್ತೂರು: ಶಿಲ್ಪಗಳಿಗೆ ಜೀವ ತುಂಬುವ ಪತ್ತಾರ

ಪಾರಂಪರಿಕ ಕಲೆ ಮುಂದುವರೆಸಿರುವ ಕಲಾವಿದ

ಪ್ರದೀಪ ಮೇಲಿನಮನಿ
Published 11 ಡಿಸೆಂಬರ್ 2021, 19:30 IST
Last Updated 11 ಡಿಸೆಂಬರ್ 2021, 19:30 IST
ವಿಗ್ರಹ ತಯಾರಿಕೆಯಲ್ಲಿ ಮಗ್ನರಾಗಿರುವ ಸುರೇಶ ಪತ್ತಾರ 
ವಿಗ್ರಹ ತಯಾರಿಕೆಯಲ್ಲಿ ಮಗ್ನರಾಗಿರುವ ಸುರೇಶ ಪತ್ತಾರ    

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬಸಾಪುರ ಗ್ರಾಮದ ಶಿಲ್ಪಿ ಸುರೇಶ ಗುರುನಾಥ ಪತ್ತಾರ ಅವರು ಕಾಡುಗಲ್ಲಿನಲ್ಲಿ ವೈವಿಧ್ಯಮಯ ದೇವರ ಮೂರ್ತಿಗಳನ್ನು ಕೆತ್ತನೆ ಮಾಡಿ ಅವುಗಳಿಗೆ ಜೀವ ತುಂಬುವಲ್ಲಿ ಗಮನಸೆಳೆದಿದ್ದಾರೆ. ಅಜ್ಜನ ಕಾಲದ ಕಲಾ ಪರಂಪರೆಯ ಉತ್ತರಾಧಿಕಾರಿಯಾಗಿ ಅವರು ಮುಂದುವರಿದಿದ್ದಾರೆ.

ಅವರ ಕೈಚಳಕದಲ್ಲಿ ಅರಳಿರುವ ದೇವರ ಶಿಲ್ಪಗಳ ನಾಡಿನ ಗರ್ಭಗುಡಿಯಲ್ಲಿ ಸ್ಥಾನ ಪಡೆದುಕೊಂಡು ನಿತ್ಯ ಪೂಜೆಗೆ ಪಾತ್ರವಾಗುತ್ತಿವೆ. ಕಲ್ಲಿನ ಮೂರ್ತಿ ಕೆತ್ತುವಾಗ ಹೆಚ್ಚು ತಾಳ್ಮೆ, ಏಕಾಗ್ರತೆ ಬೇಕಾಗುತ್ತದೆ. ಸೂಕ್ಷ್ಮ ಕೆತ್ತನೆಯಲ್ಲಿ ತೊಡಗಿದರೆ ಇಡೀ ವಿಗ್ರಹ ವಿರೂಪಗೊಳ್ಳುತ್ತದೆ ಎನ್ನುತ್ತಾರೆ.

ಮನೆತನದ ಕಸುಬು: ‘ಶಿಲ್ಪದಲ್ಲಿ ದೇವರ ಮೂರ್ತಿಗಳ ಕೆತ್ತನೆ ಮಾಡುವುದು ಮನೆತನದ ಕಸುಬು. ತಲೆ–ತಲಾಂತರಗಳಿಂದ ಬಳುವಳಿಯಾಗಿ ಬಂದಿದೆ. ರಕ್ತಗತವಾಗಿದ್ದರಿಂದ ಶಿಲ್ಪ ಕಲೆ ನನಗೆ ಸಿದ್ಧಿಸಿದೆ’ ಎಂದು ಹೇಳುತ್ತಾರೆ.

ADVERTISEMENT

ಅಜ್ಜ, ತಂದೆ ಮಾಡುವ ಕೆತ್ತನೆಯನ್ನು ನೋಡುತ್ತ, ಸುತ್ತಿಗೆ, ಉಳಿ ಹಿಡಿದು ಆಡುತ್ತ ಬೆಳೆದವರು ಸುರೇಶ್. ಮೀಸೆ ಚಿಗುರುವ ವಯಸ್ಸಿನಲ್ಲಿಯೇ ತಂದೆ ಮಾಡುತ್ತಿದ್ದ ಕೆತ್ತನೆಯ ಕಲೆಯನ್ನು ಸಿದ್ಧಿಸಿಕೊಂಡರು. ಅಂದಿನಿಂದ ಇವರ ಕಲಾಕುಶಲತೆ ಮುಂದುವರಿದಿದೆ. ಇದರಲ್ಲಿ ಪ್ರಾವೀಣ್ಯತೆ ಸಾಧಿಸಿದ್ದಾರೆ.

ಮಾರುತಿ, ಬಸವಣ್ಣ, ಈಶ್ವರಲಿಂಗ ವಿಗ್ರಹಗಳು, ರೇಣುಕಾಚಾರ್ಯ, ವಾಲ್ಮೀಕಿ ಮೊದಲಾದ ಪುತ್ಥಳಿಗೆ ಜೀವ ತುಂಬಿದ್ದಾರೆ. ಬೈಲಹೊಂಗಲ ತಾಲ್ಲೂಕು ಸಂಗೊಳ್ಳಿ, ರಾಮದುರ್ಗ ತಾಲ್ಲೂಕಿನ ಓಬಳಾಪುರ, ಕಿತ್ತೂರು ತಾಲ್ಲೂಕಿನ ಕಿತ್ತೂರು ಸೇರಿ, ಖೋದಾನಪುರ, ಹೊನ್ನಿದಿಬ್ಬ ಬಚ್ಚನಕೇರಿ ಗ್ರಾಮಗಳಲ್ಲಿ ಇವರ ಮೂರ್ತಿಗಳನ್ನು ಕಾಣಬಹುದಾಗಿದೆ.

ತಗ್ಗಿದ ಬೇಡಿಕೆ: ‘ಕಲ್ಲಿನ ಮೂರ್ತಿ ಸಿದ್ಧಪಡಿಸಲು ಬಾಗಲಕೋಟೆ ಜಿಲ್ಲೆಯ ಕಲಾದಗಿ ‘ಕೃಷ್ಣಶಿಲೆ’ಯನ್ನು ಹೆಚ್ಚು ಉಪಯೋಗಿಸುತ್ತೇವೆ. ಅಮೃತಶಿಲೆ ಬಳಕೆ ಮಾಡುವುದು ಉಂಟು. ಶಿಲಾಮೂರ್ತಿಗಳಿಗೆ ಈಗ ಬೇಡಿಕೆ ತಗ್ಗಿದೆ. ಇದರಿಂದಾಗಿ ಚಿನ್ನ, ಬೆಳ್ಳಿ, ತಾಮ್ರ ವಿಗ್ರಹಗಳು, ಪಲ್ಲಕ್ಕಿ, ಪಾದುಕೆ ನಿರ್ಮಾಣಕ್ಕೂ ಮುಂದಾಗಿದ್ದೇವೆ’ ಎಂದು ಸುರೇಶ ತಿಳಿಸಿದರು.

‘ಕಿರೀಟ, ಮುಖವಾಡಗಳಿಗೆ ಹೆಚ್ಚು ಬೇಡಿಕೆ ಬರುತ್ತವೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆ ಮತ್ತು ನೆರೆಯ ಗೋವಾ ರಾಜ್ಯಕ್ಕೂ ಲೋಹದಲ್ಲಿ ಮೂರ್ತಿಗಳನ್ನು ತಯಾರಿಸಿ ಕೊಡಲಾಗಿದೆ’ ಎಂದು ಮಾಹಿತಿ ನೀಡಿದರು. ಅವರ ಸಂಪರ್ಕಕ್ಕೆ ಮೊ.ಸಂಖ್ಯೆ: 9980209194.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.