ಬೆಳಗಾವಿ: ತಾಲೂಕಿನ ಖನಗಾಂವ ಬಿ.ಕೆ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ಅಕ್ಷಾ ಮೆಹಬೂಬ್ ಜಮಾದಾರ(14) ಮೃತ ಬಾಲಕಿ.
‘ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ, ಅಕ್ಷಾ ನಮಗೆ ಕೆಲಸಕ್ಕೆ ಸಹಾಯ ಮಾಡಲು ಕೃಷಿಭೂಮಿಗೆ ಬಂದಿದ್ದಳು. ಮೋಡ ಕವಿದ ವಾತಾವರಣ ಇದ್ದ ಕಾರಣ, ನಾವೆಲ್ಲರೂ ವಾಹನಗಳಲ್ಲಿ ಮನೆಗೆ ಮರಳುತ್ತಿದ್ದೆವು. ಆದರೆ, ಅಕ್ಷಾ ನಡೆದುಕೊಂಡು ಹೋಗಲು ಇಷ್ಟಪಟ್ಟಳು. ಗುಡುಗು ಸಹಿತವಾಗಿ ಮಳೆ ಆರಂಭವಾಯಿತು. ಇತರರೊಂದಿಗೆ ಮರದ ಕೆಳಗೆ ಆಶ್ರಯ ಪಡೆದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾಳೆ’ ಎಂದು ತಂದೆ ಮೆಹಬೂಬ್ ಕಣ್ಣೀರು ಸುರಿಸಿದರು.
ಬೆಳಗಾವಿ ನಗರ ಮತ್ತು ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಧ್ಯಾಹ್ನದ ಗುಡುಗು ಸಹಿತವಾಗಿ ಕೆಲಕಾಲ ಮಳೆಯಾಯಿತು. ಚನ್ನಮ್ಮನ ಕಿತ್ತೂರು ಮತ್ತು ರಾಮದುರ್ಗದಲ್ಲೂ ಮಳೆಯಾಯಿತು.
ಬಿರುಗಾಳಿಯಿಂದ ಬೆಳಗಾವಿ ತಾಲ್ಲೂಕಿನ ಮುತಗಾ ಗ್ರಾಮದ ಬಳಿ ಮರ ಉರುಳಿಬಿದ್ದು, ಬೆಳಗಾವಿ-ಬಾಗಲಕೋಟೆ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಪೊಲೀಸ್ ಸಿಬ್ಬಂದಿ ಮರ ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.