ADVERTISEMENT

ಬೆಳಗಾವಿ ಎಪಿಎಂಸಿ ಮಳಿಗೆ ಹಂಚಿಕೆ ವಿಚಾರ: ಸಚಿವರ ಎದುರಲ್ಲೇ ವ್ಯಾಪಾರಿಗಳ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 11:28 IST
Last Updated 8 ಫೆಬ್ರುವರಿ 2026, 11:28 IST
   

ಬೆಳಗಾವಿ: ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆಗಳನ್ನು ಹಂಚಿಕೆಗೆ ಸಂಬಂಧಿಸಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಎದುರಲ್ಲೇ ಎಪಿಎಂಸಿ ಮತ್ತು ಜೈ ಕಿಸಾನ್‌ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರ ಮಧ್ಯೆ ಜಟಾಪಟಿ ನಡೆಯಿತು.

ಸಚಿವ ಶಿವಾನಂದ ಪಾಟೀಲ ಭಾನುವಾರ ಬೆಳಿಗ್ಗೆ ಎಪಿಎಂಸಿಗೆ ಆಗಮಿಸಿ, ವ್ಯವಸ್ಥೆ ಪರಿಶೀಲಿಸಿದರು.

ಆಗ ಸಚಿವರನ್ನು ಭೇಟಿಯಾದ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆ ವ್ಯಾಪಾರಿಗಳು, ‘ನಾವು ಖಾಸಗಿ ತರಕಾರಿ ಮಾರುಕಟ್ಟೆಯಿಂದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಂಡಿದ್ದೇವೆ. ಆದರೆ, ಇಲ್ಲಿ ನಮಗೆ ಸರಿಯಾಗಿ ಮಳಿಗೆಗಳನ್ನು ಹಂಚುತ್ತಿಲ್ಲ. ಭಾನುವಾರ ಮಾರುಕಟ್ಟೆಯಲ್ಲೂ ವ್ಯಾಪಾರಕ್ಕೆ ಅವಕಾಶ ಕೊಡುತ್ತಿಲ್ಲ’ ಎಂದು ದೂರಿದರು.

ADVERTISEMENT

ಪಕ್ಕದಲ್ಲೇ ನಿಂತಿದ್ದ ಎಪಿಎಂಸಿ ವ್ಯಾಪಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ‘ಖಾಸಗಿ ಸಗಟು ತರಕಾರಿ ಮಾರುಕಟ್ಟೆಯಿಂದ ಬಂದವರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಲಾಗಿದೆ. ಆದರೆ, ಅವರು ಮುಖ್ಯ ಮಾರುಕಟ್ಟೆಗೆ ಬರುತ್ತಿಲ್ಲ. ರೈತರು ವ್ಯಾಪಾರ ಮಾಡುವ ಭಾನುವಾರ ಮಾರುಕಟ್ಟೆಯಲ್ಲೇ ಉಳಿದಿದ್ದಾರೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ’ ಎಂದು ತಿಳಿಸಿದರು.

ಆಗ ಪರಸ್ಪರರ ಮಧ್ಯೆ ವಾಗ್ವಾದ ತಾರಕಕ್ಕೇರಿತು. ಕೆಲವರು ಕೈಕೈ ಮಿಲಾಯಿಸುವ ಹಂತಕ್ಕೆ ಹೋದರು. ಪೊಲೀಸರು ಉಭಯ ವ್ಯಾಪಾರಿಗಳನ್ನು ಸಮಾಧಾನಪಡಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

ಸೌಹಾರ್ದಯುತವಾಗಿ ಬಗೆಹರಿಸುತ್ತೇವೆ: ಸಚಿವ

ಬೆಳಗಾವಿ: ‘ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಸಮಸ್ಯೆ ಕುರಿತಾಗಿ ಪರಿಶೀಲಿಸಿ, ಜಿಲ್ಲೆಯ ಸಚಿವರು ಮತ್ತು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು’ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

‘ತರಕಾರಿ ತಂದು ಮಾರುವವರು, ರೈತರು ಮತ್ತು ಪರವಾನಗಿ ಹೊಂದಿದ ವರ್ತಕರು ಯಾರೂ ಜಗಳ ಮಾಡಬಾರದು. ಉತ್ತಮವಾಗಿ ವ್ಯಾಪಾರ–ವಹಿವಾಟು ನಡೆಯಬೇಕು. ಇಲ್ಲಿ ಇರುವವರೆಲ್ಲರೂ ರೈತರೇ. ಯಾರಿಗೂ ತೊಂದರೆ ಆಗಬಾರದು. ತರಕಾರಿ ತಂದು ವ್ಯಾಪಾರ ಮಾಡುವ ರೈತರಿಗೂ ಅನುಕೂಲ ಮಾಡಿಕೊಡಬೇಕು. ಎಪಿಎಂಸಿಯಲ್ಲಿ ಏನೇ ಕೊರತೆಗಳಿದ್ದರೂ, ಅಗತ್ಯ ಅನುದಾನ ನೀಡಿ ಸೌಲಭ್ಯ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಯಾರಿಗೂ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶ ಇಲ್ಲ. ಆದರೆ, ಉಪ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶ ಇದೆ. ಭಾನುವಾರದ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರೂ ರೈತರ ಮಕ್ಕಳೇ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.