ADVERTISEMENT

ಬೆಳಗಾವಿ: ಬಸ್‌ ಪ್ರಯಾಣ ದರ ಶೇ 50ರಷ್ಟು ಹೆಚ್ಚಳಕ್ಕೆ ಆಕ್ರೋಶ; ಆಗ ₹10, ಈಗ ₹15!

​ಪ್ರಜಾವಾಣಿ ವಾರ್ತೆ
Published 30 ಜನವರಿ 2025, 6:40 IST
Last Updated 30 ಜನವರಿ 2025, 6:40 IST
ಸಿಬಿಟಿ–ವಂಟಮುರಿ ಕಾಲೊನಿ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಬಸ್‌ ಹಿಂದಿನ ದರದ ಟಿಕೆಟ್‌
ಸಿಬಿಟಿ–ವಂಟಮುರಿ ಕಾಲೊನಿ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಬಸ್‌ ಹಿಂದಿನ ದರದ ಟಿಕೆಟ್‌   

ಬೆಳಗಾವಿ: ನಗರ ಬಸ್‌ ನಿಲ್ದಾಣ(ಸಿಬಿಟಿ)–ವಂಟಮುರಿ ಕಾಲೊನಿ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸಾರಿಗೆ ಸಂಸ್ಥೆಯ ಬಸ್‌ಗಳ ಪ್ರಯಾಣ ದರವನ್ನು ಶೇ 50ರಷ್ಟು ಹೆಚ್ಚಿಸಿರುವುದಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ.

‘ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಬಸ್‌ ಪ್ರಯಾಣ ದರ ₹10 ಇತ್ತು. ಜನವರಿ 5ರಿಂದ ಪ್ರಯಾಣ ದರ ಶೇ 15ರಷ್ಟು ಹೆಚ್ಚಿಸಿದ್ದಾಗಿ ಸಾರಿಗೆ ಸಂಸ್ಥೆ ತಿಳಿಸಿದೆ. ಅದರ ಪ್ರಕಾರ, ಒಂದೂವರೆ ರೂಪಾಯಿ ದರ ಹೆಚ್ಚಬೇಕಿತ್ತು. ಆದರೆ, ಏಕಾಏಕಿಯಾಗಿ ₹15 ನಿಗದಿಪಡಿಸಿದ್ದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದಿನ ಮತ್ತು ಈಗಿನ ಬಸ್‌ ಪ್ರಯಾಣ ದರದ ಟಿಕೆಟ್‌ಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಬೆಳಗಾವಿ ನಗರ, ಉಪನಗರ ವ್ಯಾಪ್ತಿಯಲ್ಲಿ 150 ಬಸ್‌ ಕಾರ್ಯಾಚರಣೆ ಮಾಡುತ್ತವೆ. ಈ ಹಿಂದೆ ಮೊದಲ ಸ್ಟೇಜ್‌ನ ಪ್ರಯಾಣ ದರ ₹6, ಎರಡನೇ ಸ್ಟೇಜ್‌ನ ದರ ₹12 ಇತ್ತು. ಆದರೆ, ಪ್ರಯಾಣಿಕರು ಮತ್ತು ನಿರ್ವಾಹಕರಿಗೆ ಚಿಲ್ಲರೆ ಸಮಸ್ಯೆ ಆಗದಿರಲೆಂದು ಆ ದರವನ್ನು ಕ್ರಮವಾಗಿ ₹5, ₹10ಕ್ಕೆ ಇಳಿಸಿದ್ದೆವು. ಹಾಗಾಗಿ ₹12 ಇದ್ದ ದರವನ್ನು ₹15ಕ್ಕೆ ಇಳಿಸಿದ್ದೇವೆ’ ಎಂದು ಸಾರಿಗೆ ಸಂಸ್ಥೆಯ ಬೆಳಗಾವಿ ನಗರ ಘಟಕದ ವ್ಯವಸ್ಥಾಪಕ ಅನಂತ ಶಿರಗುಪ್ಪಿಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಸ್‌ ಪ್ರಯಾಣ ದರ ಹೆಚ್ಚಳ ಕುರಿತಂತೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಪ್ರಯಾಣಿಕರಿಗೆ ಅನುಕೂಲವಾಗುವ ದಿಸೆಯಲ್ಲೇ ಕ್ರಮ ವಹಿಸುತ್ತೇವೆ’ ಎಂದರು.

ಸಿಬಿಟಿ–ವಂಟಮುರಿ ಕಾಲೊನಿ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಬಸ್‌ ಈಗಿನ ದರದ ಟಿಕೆಟ್‌

ಬಸ್‌ಗಳ ಸಂಖ್ಯೆ ಹೆಚ್ಚಿಸಿ

‘ಶಕ್ತಿ ಯೋಜನೆ ಜಾರಿಯಾದ ನಂತರ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಅದಕ್ಕೆ ಬಸ್‌ಗಳ ಸಂಖ್ಯೆ ಹೆಚ್ಚದ ಕಾರಣ ಸಂಚಾರಕ್ಕೆ ಪರದಾಡುವಂತಾಗಿದೆ. ಜನರಿಂದ ಕಿಕ್ಕಿರಿದು ಸೇರಿದ ಬಸ್‌ಗಳಲ್ಲೇ ಓಡಾಡುವಂತಾಗಿದೆ’ ಎಂದು ಸಾರ್ವಜನಿಕರು ದೂರಿದ್ದಾರೆ.

‘ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆಯೇ ಕಡಿಮೆ ಇದೆ. ಹೀಗಿರುವಾಗ ಬಸ್‌ ಪ್ರಯಾಣ ದರ ಹೆಚ್ಚಿಸಿದರೆ ಸಾಲದು. ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.