ADVERTISEMENT

ನಿಂಗಾಪುರ: ಮಳೆಗಾಲದಲ್ಲಿ ‘ಟ್ಯೂಬ್ ತೆಪ್ಪ’ದಲ್ಲೇ ಪಯಣ

ನಿಂಗಾಪುರ ಗ್ರಾಮಸ್ಥರ ಅಪಾಯಕಾರಿ ಸಂಚಾರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 6:36 IST
Last Updated 6 ಆಗಸ್ಟ್ 2024, 6:36 IST
ಹುಲಿಕೆರೆ ಹಿನ್ನೀರಿನಲ್ಲಿ ಶಾಲೆಗೆ ಬಿಡಲು ಮಕ್ಕಳನ್ನು ಟ್ಯೂಬ್ ತೆಪ್ಪದಲ್ಲಿ ಕರೆದುಕೊಂಡು ಬರುತ್ತಿರುವ ಪಾಲಕ
ಹುಲಿಕೆರೆ ಹಿನ್ನೀರಿನಲ್ಲಿ ಶಾಲೆಗೆ ಬಿಡಲು ಮಕ್ಕಳನ್ನು ಟ್ಯೂಬ್ ತೆಪ್ಪದಲ್ಲಿ ಕರೆದುಕೊಂಡು ಬರುತ್ತಿರುವ ಪಾಲಕ   

ಚನ್ನಮ್ಮನ ಕಿತ್ತೂರು: ಎರಡು ಲಾರಿ ಟ್ಯೂಬ್ ಗಳಿಗೆ ಗಾಳಿ ತುಂಬಿಸಿ ಅದರ ಮೇಲೆ ಕಟ್ಟಿಗೆಯಿಟ್ಟು, ಎರಡೂ ದಂಡೆಗೆ ನೆಡಲಾಗಿರುವ ಗೂಟಗಳಿಗೆ ಹಗ್ಗ ಕಟ್ಟಿ ಮಾಡಿರುವ ‘ಜಗ್ಗುವ ಟ್ಯೂಬ್ ತೆಪ್ಪ’ದಲ್ಲಿ ತಾಲ್ಲೂಕಿನ ಕುಲವಳ್ಳಿಯ ನಿಂಗಾಪುರ ಗ್ರಾಮಸ್ಥರು, ಶಾಲಾ ಮಕ್ಕಳು, ಮಹಿಳೆಯರು, ರೈತರಿಗೆ ಇದೇ ಸಂಚಾರದ ಜಲಮಾರ್ಗವಾಗಿದೆ.

‘ಧಾರವಾಡ ತಾಲ್ಲೂಕಿನ ಅಳ್ನಾವರ ಬಳಿಯ ಹುಲಿಕೆರೆ ಭರ್ತಿಯಾದರೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನಿಂಗಾಪುರಕ್ಕೆ ಈ ಅಪಾಯಕಾರಿ ನೀರ ಮೇಲಿನ ಸಂಚಾರ ತಪ್ಪಿದ್ದಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

‘ಅಲ್ಲದೇ, ನಾವು ಕೃಷಿ ಮಾಡಿರುವ ಜಮೀನುಗಳು ಮುಳುಗುತ್ತವೆ. ಸಂಚಾರ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಪರ್ಯಾಯ ಮಾರ್ಗವನ್ನು ನಾವೇ ಕಂಡುಕೊಂಡಿದ್ದೇವೆ’ ಎನ್ನುತ್ತಾರೆ.

ADVERTISEMENT

‘ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನೀರು ಇಳಿದ ಬಳಿಕ ಅವರು ಗಮನ ಹರಿಸುವುದಿಲ್ಲ. ಮಳೆಗಾಲದಲ್ಲಿ ಗಮನಕ್ಕೆ ತರಲಾದ ಸಂಚಾರ ಸಮಸ್ಯೆಯ ನೋವು ಮತ್ತೆ ಮಳೆಗಾಲದಲ್ಲಿಯೇ ಮುಂದುವರಿಯುತ್ತದೆ. ಎರಡು ದಶಕದಿಂದ ಈ ಸಮಸ್ಯೆ ಹಾಗೇ ಮುಂದುವರಿದಿದೆ. ಏನೂ ಕ್ರಮವಾಗಿಲ್ಲ’ ಎಂದು ಈರಯ್ಯ ನಿಂಗಾಪುರಮಠ ಬೇಸರಿಸಿದರು.

‘ಹಿನ್ನೀರಿನ ಪಶ್ಚಿಮ ದಿಕ್ಕಿನಲ್ಲಿ ಕೆಲವರ ಜಮೀನುಗಳಿವೆ. ಹತ್ತಾರು ಕುಟುಂಬಗಳು ಅಲ್ಲಿ ವಾಸವಾಗಿವೆ. ಅಲ್ಲಿಂದ ಮಕ್ಕಳು ಈ ಕಡೆಗೆ ಶಾಲೆ ಕಲಿಯಲು ಬರಬೇಕು. ಪೂರ್ವ ದಿಕ್ಕಿನಲ್ಲಿರುವ ರೈತ ಕುಟುಂಬಗಳು ಆ ದಂಡೆಗಿರುವ ಜಮೀನುಗಳಿಗೆ ದನ,ಕರುಗಳನ್ನು ಹೊಡೆದುಕೊಂಡು ಹೋಗಬೇಕು. ದನಗಳು ನೀರಿನಲ್ಲಿ ಈಜು ಬಿದ್ದು ಆ ದಂಡೆ ಸೇರುತ್ತವೆ. ಜನ, ಮಕ್ಕಳು ಟ್ಯೂಬ್ ತೆಪ್ಪದಲ್ಲಿ ಒಂದು ದಂಡೆಯಿಂದ ಮತ್ತೊಂದು ದಂಡೆಗೆ ಸಂಚರಿಸುತ್ತಾರೆ’ ಎಂದು ಕುಲವಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ದಶರಥ ಮಡಿವಾಳರ ಪರಿಸ್ಥಿತಿಯನ್ನು ವಿವರಿಸಿದರು.

‘ಸರ್ಕಾರ ಅಥವಾ ಜಿಲ್ಲಾಡಳಿತ ಮಳೆಗಾಲದಲ್ಲಿ ಎದುರಾಗುವ ಸಮಸ್ಯೆ ತಪ್ಪಿಸಬೇಕು. ಇಲ್ಲಿ ಕಾಲುಸಂಕ ನಿರ್ಮಾಣ ಮಾಡಬೇಕು. ಜನ, ಜಾನುವಾರು ಸಂಚರಿಸಲು ಅನುಕೂಲ ಮಾಡಿಕೊಡಬೇಕು. ಅನಾಹುತ ಸಂಭವಿಸುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಮಹಾಂತೇಶ ಎಮ್ಮಿ, ಗ್ರಾಮಸ್ಥರಾದ ಮಾರುತಿ ಕಲ್ಲೂರ, ಹನುಮಂತ ಹರಿಜನ, ನದೀಮುಲ್ಲಾ. ಫಕ್ಕೀರಪ್ಪ ಬಂಡರಗಾಳಿ ಬಸವರಾಜ ಸಾವನ್ನವರ, ಸೋಮಪ್ಪ ತೋಪಗಾನಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.