ADVERTISEMENT

ಅಥಣಿ| ಜನರ ಸೇವೆಗೆ ಇಲ್ಲದ ಆರೋಗ್ಯ ಕೇಂದ್ರ

4 ಕಿ.ಮೀ. ದೂರದ ಸತ್ತಿಗೆ ಹೋಗಬೇಕು

​ಪ್ರಜಾವಾಣಿ ವಾರ್ತೆ
Published 23 ಮೇ 2021, 10:00 IST
Last Updated 23 ಮೇ 2021, 10:00 IST
ಅಥಣಿ ತಾಲ್ಲೂಕಿನ ನಂದೇಶ್ವರ ಗ್ರಾಮದ ಆರೋಗ್ಯ ಕೇಂದ್ರ ದುಃಸ್ಥಿತಿಯಲ್ಲಿದೆ
ಅಥಣಿ ತಾಲ್ಲೂಕಿನ ನಂದೇಶ್ವರ ಗ್ರಾಮದ ಆರೋಗ್ಯ ಕೇಂದ್ರ ದುಃಸ್ಥಿತಿಯಲ್ಲಿದೆ   

ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಂದೇಶ್ವರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಜನರಿಗೆ ಸೇವೆ ನೀಡುತ್ತಿಲ್ಲ. ಕೊರೊನಾ 2ನೇ ಅಲೆಯ ಈ ಸಂದರ್ಭದಲ್ಲಾದರೂ ಕೇಂದ್ರ ಕಾರ್ಯನಿರ್ವಹಿಸುವಂತೆ ಮಾಡಬೇಕು. ವೈದ್ಯರನ್ನು ನೇಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೊರೊನಾದಿಂದ ನಲುಗಿ ಹೋಗಿರುವ ಗ್ರಾಮೀಣ ಜನತೆಗೆ ಸ್ಥಳೀಯವಾಗಿ ಆರೋಗ್ಯ ಸೇವೆ ದೊರಕದಿರುವುದು ಸಂಕಷ್ಟ ತಂದೊಡ್ಡಿದೆ. ಈ ಆರೋಗ್ಯ ಉಪ ಕೇಂದ್ರಕ್ಕೆ ಎರಡು ಹುದ್ದೆ ಖಾಲಿ ಇದ್ದರೂ ಇದುವರೆಗೂ ನೇಮಕವಾಗಿಲ್ಲ. ಒಬ್ಬ ಮಹಿಳಾ ಸಿಬ್ಬಂದಿ ಮಾತ್ರ ಪ್ರಭಾರಿ ಇದ್ದು ಅವಶ್ಯವಿದ್ದಾಗ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ, ಕಟ್ಟಡವೂ ಬಹಳ ಶಿಥಿಲಾವಸ್ಥೆಗೆ ತಲುಪಿದೆ. ಪಾಳು ಬಿದ್ದಿದೆ. ಸುತ್ತಲೂ ತಿಪ್ಪೆಗುಂಡಿ ನಿರ್ಮಾಣವಾಗಿದೆ. ಇದರಿಂದಾಗಿ, ಗ್ರಾಮೀಣರಿಗೆ ಸ್ಥಳೀಯವಾಗಿಯೇ ಆರೋಗ್ಯ ಸೇವೆ ದೊರೆಯಬೇಕು ಎಂಬ ಸರ್ಕಾರದ ಉದ್ದೇಶಕ್ಕೆ ಇಲ್ಲಿ ಹಿನ್ನಡೆಯಾಗಿದೆ.

ಗ್ರಾಮದಲ್ಲಿ ಮಕ್ಕಳು ಸೇರಿದಂತೆ 5ಸಾವಿರ ಜನಸಂಖ್ಯೆ ಇದೆ. ಇಲ್ಲಿನ ಜನರಿಗೆ 10 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಸೇವೆ ಮರೀಚಿಕೆಯಾಗಿದೆ. ಅನೇಕ ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಟ್ಟಡ ನಿರ್ಮಿಸಲಾಗಿತ್ತು. ಆದರೆ, ಅದು ಶಿಥಿಲಗೊಂಡು ಪಾಳು ಬಿದ್ದಿದೆ. ಅದನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡುವುದು ಅವಶ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಆರೋಗ್ಯದಲ್ಲಿ ಏರುಪೇರಾದರೆ 4 ಕಿ.ಮೀ. ದೂರದಲ್ಲಿರುವ ಸತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ಚಿಕ್ಕ ಮಕ್ಕಳು, ವೃದ್ಧರು, ಅಂಗವಿಕಲರು ಬೇರೆ ಸ್ಥಳಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದು ಸಾಧ್ಯವಾಗುತ್ತಿಲ್ಲ. ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಪೊಲೀಸರ ಎಲ್ಲಿ ಹೊಡೆದಾರೋ ಎನ್ನುವ ಭಯವೂ ಜನರನ್ನು ಕಾಡುತ್ತಿದೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ಸಂಜೀವಿನಿ ಆಗಬೇಕಾಗಿದ್ದ ಉಪ ಕೇಂದ್ರದಿಂದ ಪ್ರಯೋಜನವೇ ಆಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎನ್ನುವ ಆಗ್ರಹ ಜನರದಾಗಿದೆ.

‘ಕೇಂದ್ರವು ದುಃಸ್ಥಿತಿಯಲ್ಲಿರುವ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗ್ರಾಮದ ಬಡ ಜನರಿಗೆ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ. ಸರ್ಕಾರ ಗ್ರಾಮೀಣ ಆರೋಗ್ಯ ಉಪ ಕೇಂದ್ರಗಳನ್ನು ಬಲಗೊಳಿಸಲು ಮುಂದಾಗಬೇಕು’ ಎಂದು ನಂದೇಶ್ವರ ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ರ. ಮುಧೋಳ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.