ADVERTISEMENT

ನೆಲಕ್ಕುರುಳಿದ ಮರ: ಎರಡು ಆಟೋರಿಕ್ಷಾ, ಕಾರಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 10:06 IST
Last Updated 15 ಸೆಪ್ಟೆಂಬರ್ 2022, 10:06 IST
   

ಬೆಳಗಾವಿ: ಇಲ್ಲಿನ ಅರಣ್ಯ ಇಲಾಖೆ ಕಚೇರಿ ಮುಂದಿನ ಹಳೇ ಪಿ.ಬಿ. ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಬೃಹತ್‌ ನೆಲಕ್ಕೆ ಉರುಳಿ ಬಿದ್ದಿದ್ದರಿಂದ ಎರಡು ಆಟೋರಿಕ್ಷಾ ಮತ್ತು ಒಂದು ಇನ್ನೋವಾ ಕಾರಿಗೆ ಹಾನಿಯಾಗಿದೆ. ಇದೇ ಮಾರ್ಗವಾಗಿ ಹೊರಟಿದ್ದ ಸರ್ಕಾರಿ ಬಸ್‌ ಅನಾಹುತದಿಂದ ಪಾರಾಗಿದೆ.

ಕೇಂದ್ರೀಯ ಬಸ್‌ ನಿಲ್ದಾಣದಿಂದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಆಗಾಗ ಸಂಚಾರ ಸಮಸ್ಯೆಯೂ ಇಲ್ಲಿ ಸಾಮಾನ್ಯ. ಆದರೆ, ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಸ್ತೆಬದಿ ನಿಲ್ಲಿಸಲಾಗಿದ್ದ ವಾಹನಗಳಿಗಷ್ಟೇ ಹಾನಿಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ರಸ್ತೆಮೇಲೆ ಬಿದ್ದಿದ್ದ ಮರ ತೆರವು ಕಾರ್ಯಾಚರಣೆ ನಡೆಸಿದರು. ಇದರಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಸವಾರರು ಪರದಾಡಿದರು.

ADVERTISEMENT

ಸವಾರ ಮೃತಪಟ್ಟಿದ್ದರು: ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೆ.13ರಂದು ಬೃಹತ್ ಮರ ಬಿದ್ದು ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದರು. ಹಿಂದಿನಿಂದ ಬರುತ್ತಿದ್ದ ಇನ್ನೊಂದು ಬೈಕ್‌ ಸವಾರ ಗಾಯಗೊಂಡಿದ್ದರು. ಇದಾದ ಎರಡು ದಿನಗಳಲ್ಲೇ ಮತ್ತೊಂದು ಮರ ಬಿದ್ದಿರುವುದು ಜನರ ಆತಂಕ ಹೆಚ್ಚಿಸಿದೆ.

ಅಪಾಯಕಾರಿ ಮರ ತೆರವುಗೊಳಿಸಿ: ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಾಗೂ ಕಾಂಗ್ರೆಸ್‌ ಭವನ ಆವರಣದ ಪಕ್ಕದಲ್ಲಿ ಬೃಹತ್‌ ಮರಗಳಿವೆ. ಅವುಗಳನ್ನು ಪರಿಶೀಲಿಸಿ, ಅಪಾಯಕಾರಿ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸಬೇಕು ಎಂದು ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಅವರು, ಬೆಳಗಾವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.