ADVERTISEMENT

ರಾಜ್ಯದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಶೇ 33ಕ್ಕೆ ಹೆಚ್ಚಿಸುವ ಗುರಿ: ಉಮೇಶ ಕತ್ತಿ

ಸಚಿವ ಉಮೇಶ ಕತ್ತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 15:06 IST
Last Updated 18 ಜನವರಿ 2022, 15:06 IST
ಅಥಣಿಯಲ್ಲಿ ಅಭಿವೃದ್ಧಿಪಡಿಸಿರುವ ಸಸ್ಯೋದ್ಯಾನವನ್ನು ಅರಣ್ಯ ಸಚಿವ ಉಮೇಶ ಕತ್ತಿ ಉದ್ಘಾಟಿಸಿದರು
ಅಥಣಿಯಲ್ಲಿ ಅಭಿವೃದ್ಧಿಪಡಿಸಿರುವ ಸಸ್ಯೋದ್ಯಾನವನ್ನು ಅರಣ್ಯ ಸಚಿವ ಉಮೇಶ ಕತ್ತಿ ಉದ್ಘಾಟಿಸಿದರು   

ಅಥಣಿ: ‘ರಾಜ್ಯದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ಈಗಿರುವ ಶೇ 21ರಿಂದ ಶೇ 33ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದು ಅರಣ್ಯ ಸಚಿವ ಉಮೇಶ ಕತ್ತಿ ತಿಳಿಸಿದರು.

ಪ್ರಾದೇಶಿಕ ಅರಣ್ಯ ಅಥಣಿ ವಲಯದಿಂದ ₹ 1.10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಸಸ್ಯೋದ್ಯಾನ (ಲಕ್ಷ್ಮೀವನ) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅರಣ್ಯ ವಿಭಾಗದಲ್ಲಿ ಸಾಕಷ್ಟು ಸಮೃದ್ಧಿ ಹೊಂದಿರುವ ರಾಜ್ಯ ನಮ್ಮದು. ಆನೆ, ಹುಲಿ, ಚಿರತೆ ಹಾಗೂ ಇತರ ಪ್ರಾಣಿಗಳನ್ನು ಹೊಂದಿದೆ. ಅರಣ್ಯ ಇಲಾಖೆ ವತಿಯಿಂದ ರೈತರಿಗೆ ಅನುಕೂಲ ಆಗುವಂತಹ ಅನೇಕ ಸರಳ ನಿಯಮಗಳನ್ನು ರೂಪಿಸಲಾಗುತ್ತಿದೆ’ ಎಂದರು.

ADVERTISEMENT

‘ರೈತರು ಬೆಳೆಯುವ ಶ್ರೀಗಂಧ ಮೊದಲಾದ ಮರ–ಗಿಡಗಳನ್ನು ಅವರೇ ಮಾರಾಟ ಮಾಡುವಂತೆ ನಿಯಮಗಳನ್ನು ಸರಳೀಕರಣಗೊಳಿಸಲಾಗುವುದು. ಸಾರ್ವಜನಿಕರು ಮರ–ಗಿಡಗಳನ್ನು ಹೆಚ್ಚೆಚ್ಚು ಬೆಳೆಸಬೇಕು. ಅರಣ್ಯ ಸಂಪತ್ತನ್ನು ರಕ್ಷಿಸಬೇಕು’ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ‘ಜವಾಬ್ದಾರಿಯುತ ನಾಗರಿಕರಾದ ನಾವು ಅರಣ್ಯ ಪಾಲನೆಗೆ ಆದ್ಯತೆ ಕೊಡಬೇಕು. ರಸ್ತೆ ಬದಿ ಗಿಡಗಳನ್ನು ನೆಟ್ಟು ಸುಮ್ಮನಾಗಬಾರದು. ಅವುಗಳನ್ನು ಪೋಷಣೆ ಮಾಡುವಂತಹ ಕೆಲಸ ನಿರ್ವಹಿಸಬೇಕು. ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ಸ್ವಯಂಪ್ರೇರಿತವಾಗಿ ಮಾಡಬೇಕು. ಸರ್ಕಾರಕ್ಕೆ ಸಹಕಾರ ಕೊಡಬೇಕು’ ಎಂದು ಕೋರಿದರು.

‘ಪಟ್ಟಣದ ಸಮೀಪದಲ್ಲಿರುವ 50 ಎಕರೆ ಅರಣ್ಯ ಭೂಮಿಯನ್ನು ಅತಿಕ್ರಮಣ ಆಗದಂತೆ ರಕ್ಷಿಸಿರುವುದು ಮಾದರಿಯಾಗಿದೆ’ ಎಂದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು. ಅಥಣಿ ಶಾಸಕ ಮಹೇಶ ಕುಮಠಳ್ಳಿ, ಆರ್‌ಎಸ್‌ಎಸ್‌ ಮುಖಂಡ ಅರವಿಂದರಾವ ದೇಶಪಾಂಡೆ ಮಾತನಾಡಿದರು.

ಅರಣ್ಯ ಇಲಾಖೆಯ ಅಧಿಕಾರಿಗಳಾದ ವಿಜಯಕುಮಾರ ಸಾಲಿಮಠ, ಎ.ಮರಿಯಪ್ಪ, ಸಂತೋಷ ಕಾಮಗೌಡರ, ಎಸ್.‍‍ಇ. ಅಭ್ಯಂಕರ, ಸುನೀತಾ ನಿಂಬರಗಿ, ಅಶೋಕ ಚೌಗಲಾ, ಪ್ರಶಾಂತ ಗಾಣಿಗೇರ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.