ADVERTISEMENT

ಪ್ರಕೃತಿ ಮಾರ್ಗದರ್ಶಕರ ನಿಯೋಜನೆ

ಅರಣ್ಯ ಇಲಾಖೆಯ ವಿಜಯಕುಮಾರ ಸಾಲಿಮಠ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 15:21 IST
Last Updated 10 ಜನವರಿ 2022, 15:21 IST
ಖಾನಾಪುರದ ಭೀಮಗಡ ಪ್ರಕೃತಿ ಶಿಬಿರದಲ್ಲಿ ನಡೆದ ಅರಣ್ಯ ಇಲಾಖೆಯ ಬೆಳಗಾವಿ ವೃತ್ತ ವ್ಯಾಪ್ತಿಯ ಪ್ರಕೃತಿ ಮಾರ್ಗದರ್ಶಕರ ಐದು ದಿನಗಳ ಮೂಲ ತರಬೇತಿ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ, ಸಿ.ಸಿ.ಎಫ್ ವಿಜಯಕುಮಾರ ಸಾಲಿಮಠ ಉದ್ಘಾಟಿಸಿದರು
ಖಾನಾಪುರದ ಭೀಮಗಡ ಪ್ರಕೃತಿ ಶಿಬಿರದಲ್ಲಿ ನಡೆದ ಅರಣ್ಯ ಇಲಾಖೆಯ ಬೆಳಗಾವಿ ವೃತ್ತ ವ್ಯಾಪ್ತಿಯ ಪ್ರಕೃತಿ ಮಾರ್ಗದರ್ಶಕರ ಐದು ದಿನಗಳ ಮೂಲ ತರಬೇತಿ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ, ಸಿ.ಸಿ.ಎಫ್ ವಿಜಯಕುಮಾರ ಸಾಲಿಮಠ ಉದ್ಘಾಟಿಸಿದರು   

ಖಾನಾಪುರ (ಬೆಳಗಾವಿ ಜಿಲ್ಲೆ): ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಒಟ್ಟು 12 ಪ್ರವಾಸಿ ತಾಣಗಳಲ್ಲಿ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಪ್ರಮಾಣೀಕೃತ ಪ್ರಕೃತಿ ಮಾರ್ಗದರ್ಶಕರನ್ನು ನಿಯೋಜಿಸಿ ಅವರ ಮೂಲಕ ಪ್ರಾಕೃತಿಕ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶ ಇದೆ ಎಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಸಾಲಿಮಠ ಮಾಹಿತಿ ನೀಡಿದರು.

ತಾಲ್ಲೂಕಿನ ಭೀಮಗಡ ಪ್ರಕೃತಿ ಶಿಬಿರದಲ್ಲಿ ಸೋಮವಾರ ಪ್ರಕೃತಿ ಮಾರ್ಗದರ್ಶಕರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಈಗಾಗಲೇ ಅರಣ್ಯ ಇಲಾಖೆಯು ಚಾರಣ ಪ್ರಿಯರನ್ನು ಪ್ರವಾಸಿ ತಾಣಗಳಿಗೆ ಕರೆದೊಯ್ದು ಪ್ರವಾಸಿ ತಾಣದ ವಿಶೇಷತೆ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಮಹತ್ವ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ವಿವರಿಸುವ ಉದ್ದೇಶದಿಂದ 45 ಸ್ವಯಂ ಸೇವಕರನ್ನು ಪ್ರಕೃತಿ ಮಾರ್ಗದರ್ಶಕರನ್ನಾಗಿ ನೇಮಕಗೊಳಿಸಲಾಗಿದೆ. ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ’ ಎಂದರು.

ADVERTISEMENT

‘ರಾಜ್ಯದ ವಿವಿಧೆಡೆ ಇಂತಹ ಮಾರ್ಗದರ್ಶಕರು ಸೇವೆ ಸಲ್ಲಿಸುತ್ತಿದ್ದು, ಬೆಳಗಾವಿ ವೃತ್ತದ ಮಟ್ಟಿಗೆ ಇದು ಪ್ರಥಮ ಪ್ರಯತ್ನ. ಇದು ಯಶಸ್ವಿಯಾದರೆ ಉಭಯ ಜಿಲ್ಲೆಗಳ ಮತ್ತಷ್ಟು ಪ್ರವಾಸಿ ತಾಣಗಳಲ್ಲಿ ಈ ಯೋಜನೆಯನ್ನು ಮುಂದುವರೆಸುವ ಆಲೋಚನೆಯಿದೆ’ ಎಂದು ವಿವರಿಸಿದರು.

ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ, ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನವೀನಕುಮಾರ, ರೋಣಿತ್ ನಂಜಪ್ಪ, ರಾಹುಲ್ ಆರಾಧ್ಯ, ಸಂದೀಪ, ಪ್ರವೀಣ ಬಾಗೋಜಿ ಸೇರಿದಂತೆ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.