ಖಾನಾಪುರ: ದಟ್ಟ ಕಾಡಿನೊಳಗೆ ಇರುವ ಗ್ರಾಮಗಳ ಗರ್ಭಿಣಿ, ಬಾಣಂತಿ ಹಾಗೂ ಅನಾರೋಗ್ಯಕ್ಕೆ ಒಳಗಾದವರ ಸುರಕ್ಷತೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಇವರಿಗಾಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದೆ. ಯಾರಿಗೆ ಅನುಕೂಲವಿದೆಯೋ ಅವರನ್ನು ಸಂಬಂಧಿಕರ ಮನೆಗೆ ಕಳುಹಿಸಿ, ಅಲ್ಲಿಂದಲೇ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.
ಇಲಾಖೆಯ ವತಿಯಿಂದ ಗರ್ಭಿಣಿಯರು ಮತ್ತು ರೋಗಿಗಳ ಜೊತೆ ನಿರಂತರವಾಗಿ ಸಂಪರ್ಕ ಸಾಧಿಸಿ ಅವರ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದು, ಯಾವುದೇ ತುರ್ತು ಸಂದರ್ಭಗಳಲ್ಲಿ ಅವರ ಬಳಿ ಸುಲಭವಾಗಿ ತಲುಪುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿಟ್ಟುಕೊಂಡಿದೆ.
ತಾಲ್ಲೂಕಿನ ಭೀಮಗಡ ವನ್ಯಧಾಮದ ಕಾನನದಂಚಿನ ಗವ್ವಾಳಿ, ಕೊಂಗಳಾ, ಪಾಸ್ತೊಳ್ಳಿ, ಅಮಗಾಂವ, ದೇಗಾಂವ ಹಾಗೂ ಇನ್ನಿತರ ಕೆಲ ಗ್ರಾಮಗಳ ಬಳಿ ಮಳೆ ಸುರಿಯಲಾರಂಭಿಸಿದರೆ ಸಾಕು; ಈ ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿದುಕೊಂಡು ನಡುಗಡ್ಡೆಯಾಗುತ್ತವೆ.
ಇವು ದಟ್ಟ ಅಡವಿಯ ನಡುವೆ ಇದ್ದು, ಇವುಗಳನ್ನು ಸಂಪರ್ಕಿಸಲು ಸರಿಯಾದ ರಸ್ತೆ ಮತ್ತು ಸೇತುವೆಗಳಿಲ್ಲದ ಕಾರಣ ಇಲ್ಲಿಯ ಜನರು ಮಳೆಗಾಲದಲ್ಲಿ ಹೊರಜಗತ್ತಿನಿಂದ ದೂರ ಉಳಿಯುತ್ತಾರೆ. ಆದರೆ ಅಪಘಾತ, ಅನಾರೋಗ್ಯ, ಹೆರಿಗೆ, ವನ್ಯಜೀವಿಗಳ ದಾಳಿ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಈ ಊರಿನ ಜನರು ವೈದ್ಯಕೀಯ ಚಿಕಿತ್ಸೆ ಪಡೆಯಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ.
ರಸ್ತೆ ಸಂಪರ್ಕ ಕಡಿತಗೊಳ್ಳುವ ಊರುಗಳಿಗೆ ಭೇಟಿ ನೀಡಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ, ಆರೋಗ್ಯ ಮಿತ್ರರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಳೆದುಕೊಳ್ಳುವ ಗ್ರಾಮಗಳ ಗರ್ಭಿಣಿಯರು, ವಯೋವೃದ್ಧರು ಮತ್ತು ಅನಾರೋಗ್ಯಪೀಡಿತರ ಪಟ್ಟಿ ಸಿದ್ಧಪಡಿಸಿದ್ದಾರೆ.
ಕಳೆದ ವರ್ಷ ಕಹಿನೆನಪು: ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ತಾಲ್ಲೂಕಿನ ಅಮಗಾಂವ ಗ್ರಾಮದ ಮಹಿಳೆಯೊಬ್ಬರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಊರಿನ ಜನರು ಮಹಿಳೆಯನ್ನು ಚಟ್ಟದ ಮೇಲೆ ಮಲಗಿಸಿ ಹೊತ್ತುಕೊಂಡು 10 ಕಿ.ಮೀ ನಡೆದು ಹೋದರು. ಬಳಿಕ ಅಲ್ಲಿಗೆ ಬಂದ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಮಹಿಳೆ ಬದುಕುಳಿಯಲಿಲ್ಲ.
ಇಂಥ ಘಟನೆ ಮರುಕಳಿಸದಂತೆ ಆರೋಗ್ಯ ಇಲಾಖೆ ಕ್ರಮ ವಹಿಸಿದೆ. ಅಡವಿಯಲ್ಲಿರುವ ಎಂಟು ತಿಂಗಳು ತುಂಬಿದ ಗರ್ಭಿಣಿಯರು, ವಿವಿಧ ರೋಗಗಳಿಂದ ಬಳಲುತ್ತಿರುವ ರೋಗಿಗಳು ಮತ್ತು ವೃದ್ಧರನ್ನು ಸಂಪರ್ಕಿಸಿ ಅವರ ಜೊತೆ ಮಳೆಗಾಲದ ಸಂಪರ್ಕ ಸಮಸ್ಯೆಯ ಬಗ್ಗೆ ಚರ್ಚಿಸಲಾಗಿದೆ. ಈಗಾಗಲೇ 9 ಗರ್ಭಿಣಿಯರನ್ನು ಮತ್ತು ಹಲವು ರೋಗಿಗಳನ್ನು ಆಯಾ ಊರುಗಳಿಂದ ಹೊರತರುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.