ADVERTISEMENT

ತನಿಖೆಯಾಗಲಿ, ಸತ್ಯಾಂಶ ಹೊರಬರಲಿ: ರಾಜೀವ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 13:39 IST
Last Updated 12 ಏಪ್ರಿಲ್ 2022, 13:39 IST

ಬೆಳಗಾವಿ: ‘ಒಬ್ಬರ ಸಾವು ಒಳ್ಳೆಯ ಸುದ್ದಿ ಅಲ್ಲ. ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ತನಿಖೆ ಆಗಬೇಕು. ಆಗ ಸತ್ಯಾಸತ್ಯತೆ ಹೊರಬರಲಿದೆ. ಒಬ್ಬನ ಸಾವನ್ನು ಹಗುರವಾಗಿ ಯಾರೂ ತೆಗೆದುಕೊಳ್ಳಬಾರದು’ ಎಂದು ಕುಡಚಿಯ ಬಿಜೆಪಿ ಶಾಸಕ ಪಿ.ರಾಜೀವ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿ, ‘ಗುತ್ತಿಗೆದಾರನ ಸಹೋದರನ ಹೇಳಿಕೆ ಆಧರಿಸಿಯೇ ಇಲಾಖೆ ತನಿಖೆ ನಡೆಯುತ್ತದೆ. ಆತ್ಮಹತ್ಯೆಯೋ, ಕೊಲೆಯೂ ಅಥವಾ ಪ್ರಚೋದನಾತ್ಮಕ ಆತ್ಮಹತ್ಯೆಯೋ ಎನ್ನುವುದು ತನಿಖೆಯಿಂದ ಹೊರಬರಲಿದೆ’ ಎಂದು ಪ್ರತಿಕ್ರಿಯಿಸಿದರು.

‘ಸಾವಿನಲ್ಲಿ ರಾಜಕೀಯ ಬೆರೆಸುವುದನ್ನು ನಾನು ವೈಯಕ್ತಿಕವಾಗಿ ಒಪ್ಪುವುದಿಲ್ಲ. ಅಲ್ಲದೆ ಆ ಗುತ್ತಿಗೆದಾರನ ಸಾವು ಮರೆಮಾಚಿದ ವಸ್ತುವೂ ಆಗಬಾರದು. ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕು. ಭ್ರಷ್ಟಾಚಾರ ಮುಕ್ತ ಆಡಳಿತ ಕೊಡಬೇಕು ಎನ್ನುವುದೆ ಬಿಜೆಪಿಯ ಧ್ಯೇಯ. ಭ್ರಷ್ಟಾಚಾರ ಇರುವುದು ಸತ್ಯ. ಅದನ್ನು ಹೋಗಲಾಡಿಸಬೇಕು ಎಂಬ ಬಗ್ಗೆ ನಮಗೆ ಬದ್ಧತೆ ಇದೆ. ಆತ್ಮಹತ್ಯೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂಬುದೆ ಬಿಜೆಪಿಯ ಎಲ್ಲ ನಾಯಕರ ಒತ್ತಾಯವಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.