ADVERTISEMENT

ಬೆಳಗಾವಿ | ಗುಣಮಟ್ಟದ ನೆಪ: ಹೆಸರುಕಾಳು ಖರೀದಿಗೆ ಹಿಂದೇಟು

ಇಮಾಮ್‌ಹುಸೇನ್‌ ಗೂಡುನವರ
Published 4 ಡಿಸೆಂಬರ್ 2025, 3:09 IST
Last Updated 4 ಡಿಸೆಂಬರ್ 2025, 3:09 IST
ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟಕ್ಕೆ ರೈತರು ತಂದಿರುವ ಹೆಸರು
ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟಕ್ಕೆ ರೈತರು ತಂದಿರುವ ಹೆಸರು   

ಬೆಳಗಾವಿ: ಗುಣಮಟ್ಟದ ಕೊರತೆ ಕಾರಣಕ್ಕೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಕೇಂದ್ರಗಳಲ್ಲಿ ಹೆಸರು ಖರೀದಿಗೆ ಹಿಂದೇಟು ಹಾಕಲಾಗುತ್ತಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಕಡಿಮೆ ದರಕ್ಕೆ ಖಾಸಗಿಯವರಿಗೆ ಬೆಳೆ ಮಾರುತ್ತಿದ್ದಾರೆ.

ರಾಜ್ಯದಲ್ಲಿ ಈ ವರ್ಷ ​4.47 ಲಕ್ಷ ಹೆಕ್ಟೇರ್‌ನಲ್ಲಿ ಹೆಸರು ಬೆಳೆದಿದ್ದು, ಹೆಕ್ಟೇರ್‌ಗೆ 3ರಿಂದ 4 ಕ್ವಿಂಟಲ್‌ ಇಳುವರಿ ಬಂದಿದೆ. ಈ ಬೆಳೆ ಖರೀದಿಗಾಗಿ ರಾಜ್ಯದಲ್ಲಿ 214 ಕೇಂದ್ರ ತೆರೆಯಲಾಗಿದೆ. ಎಫ್‌ಎಕ್ಯೂ ಗುಣಮಟ್ಟದ ಹೆಸರು ಕ್ವಿಂಟಲ್‌ಗೆ ₹8,768 ದರ ನಿಗದಿಪಡಿಸಲಾಗಿದೆ. ಇಲ್ಲಿ ಬೆಳೆ ಮಾರಲು 25,572 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಡಿಸೆಂಬರ್ 1ರವರೆಗೆ 2,738 ರೈತರಷ್ಟೇ 22,707 ಕ್ವಿಂಟಲ್‌ ಬೆಳೆ ಮಾರಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ 12,005 ಕ್ವಿಂಟಲ್, ಬೀದರ್‌ನಲ್ಲಿ 7,021.5 ಕ್ವಿಂಟಲ್,  ಧಾರವಾಡದಲ್ಲಿ 2,782 ಕ್ವಿಂಟಲ್, ಗದಗನಲ್ಲಿ 763.5 ಕ್ವಿಂಟಲ್, ಬೆಳಗಾವಿಯಲ್ಲಿ 90 ಕ್ವಿಂಟಲ್, ಕೊಪ್ಪಳದಲ್ಲಿ 45 ಕ್ವಿಂಟಲ್‌ ಖರೀದಿ ನಡೆದಿದೆ. ಯಾದಗಿರಿ, ಬಾಗಲಕೋಟೆ, ಚಿತ್ರದುರ್ಗ, ಮೈಸೂರು, ವಿಜಯಪುರದಲ್ಲಿ ಖರೀದಿ ಆರಂಭವಾಗಿಲ್ಲ. ಡಿ.27ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ.

ADVERTISEMENT

‘ಮಳೆಯಿಂದ ಈ ಬಾರಿ ಬೆಳೆ ನಿರೀಕ್ಷೆಯಂತೆ ಬಂದಿಲ್ಲ. ಕಾಳಿನ ಗಾತ್ರವಿಲ್ಲ. ಕಪ್ಪು ಬಣ್ಣಕ್ಕೆ ತಿರುಗಿವೆ. ಗುಣಮಟ್ಟವಿಲ್ಲ ಎಂಬ ಕಾರಣಕ್ಕೆ ಖರೀದಿಸುತ್ತಿಲ್ಲ’ ಎಂದು ಕೃಷಿ ಮಾರಾಟ ಇಲಾಖೆ ಬೆಳಗಾವಿ ಉಪನಿರ್ದೇಶಕ ಮಹಾದೇವಪ್ಪ ಚಬನೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಯಮಾವಳಿ ಸಡಿಲಿಸಿ ತಮ್ಮ ಬೆಳೆ ಖರೀದಿಸುವಂತೆ ರೈತರು ಕೋರುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸುವ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದೇವೆ’ ಎಂದರು.

ಬೈಲಹೊಂಗಲ ತಾಲ್ಲೂಕಿನ ದೊಡವಾಡದಲ್ಲಿ ಹೆಸರು ಖರೀದಿಗಾಗಿ ತೆರೆದಿರುವ ಕೇಂದ್ರ ಬಂದ್‌ ಆಗಿರುವುದು  ಪ್ರಜಾವಾಣಿ ಚಿತ್ರ
ನಾಲ್ಕು ಎಕರೆಯಲ್ಲಿ ಹೆಸರು ಕೃಷಿ ಮಾಡಿದ್ದು ನಿರೀಕ್ಷಿತ ಫಸಲು ಬಂದಿಲ್ಲ. ಬಂದದ್ದನ್ನು ಕೇಂದ್ರಗಳಲ್ಲಿ ಖರೀದಿಸುತ್ತಿಲ್ಲ. ಖಾಸಗಿಯವರಿಗೆ ಕ್ವಿಂಟಲ್‌ಗೆ ₹5500 ದರಕ್ಕೆ ಮಾರುತ್ತಿರುವೆ.
–ಈರಪ್ಪ ಹಳ್ಳದ, ರೈತ ಚಿಕ್ಕ ಉಳ್ಳಿಗೇರಿ
ಮಳೆಯಿಂದಾಗಿ ಈ ಸಲ ಉತ್ತಮ ಫಸಲು ಬಂದಿಲ್ಲ ಎಂಬುದು ಸರ್ಕಾರಕ್ಕೂ ಗೊತ್ತಿದೆ. ಹಾಗಿದ್ದರೂ ಕೇಂದ್ರ ತೆರೆದಿದೆ. ಈಗ ಖರೀದಿಗೆ ನೆಪವೊಡ್ಡಿ ರೈತರನ್ನು ಸತಾಯಿಸುತ್ತಿರುವುದು ಸರಿಯಲ್ಲ.
–ರುದ್ರೇಶ ಸಂಪಗಾವಿ, ರೈತ ಮುಖಂಡ ಸವದತ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.