ADVERTISEMENT

ಚಿಕ್ಕೋಡಿ: ಆರೇ ತಿಂಗಳಿಗೆ ಜನಿಸಿದ ಅವಳಿ ಮಕ್ಕಳು! ಆರೋಗ್ಯ ಸ್ಥಿರ

ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಮಹಿಳೆ ಆರೇ ತಿಂಗಳಿಗೆ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡೂವರೆ ತಿಂಗಳು ಶಿಶುಗಳಿಗೆ ವೈದ್ಯರು ಚಿಕಿತ್ಸೆ ನೀಡಿ, ಬದುಕಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 7:44 IST
Last Updated 6 ಮಾರ್ಚ್ 2024, 7:44 IST
ಚಿಕ್ಕೋಡಿಯ ದಿಯಾ ಆಸ್ಪತ್ರೆಯಲ್ಲಿ ಆರೇ ತಿಂಗಳಿಗೆ ಜನಿಸಿದ ಅವಳಿ ಶಿಶುಗಳು
ಚಿಕ್ಕೋಡಿಯ ದಿಯಾ ಆಸ್ಪತ್ರೆಯಲ್ಲಿ ಆರೇ ತಿಂಗಳಿಗೆ ಜನಿಸಿದ ಅವಳಿ ಶಿಶುಗಳು   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಮಹಿಳೆ ಆರೇ ತಿಂಗಳಿಗೆ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡೂವರೆ ತಿಂಗಳು ಶಿಶುಗಳಿಗೆ ವೈದ್ಯರು ಚಿಕಿತ್ಸೆ ನೀಡಿ, ಬದುಕಿಸಿದ್ದಾರೆ.

ಬ್ಯಾಂಕ್‌ ಕ್ಲರ್ಕ್ ಸಿದ್ದಪ್ಪ ಸಾತ್ವಾರ ಅವರ ಪತ್ನಿ ಅನಿತಾ ಈ ಅವಳಿ ಮಕ್ಕಳನ್ನು ಹೆತ್ತವರು. 2023ರ ಡಿಸೆಂಬರ್ 26ರಂದು ಅವರು ಸಹಜ ಹೆರಿಗೆ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಚಿಕ್ಕೋಡಿಯ ದಿಯಾ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಸಂಧ್ಯಾ ಪಾಟೀಲ ಹೆರಿಗೆ ಮಾಡಿಸಿದ್ದಾರೆ.

ಹುಟ್ಟಿದಾಗ ಮೊದಲನೇ ಶಿಶು 830 ಗ್ರಾಂ, ಎರಡನೇ ಶಿಶು 890 ಗ್ರಾಂ ತೂಕ ಇದ್ದವು. ತೂಕ ಅತ್ಯಂತ ಕಡಿಮೆ ಇದ್ದ ಕಾರಣ ಚಿಕ್ಕೋಡಿಯ ದಿವ್ಯಂ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು. ಮಕ್ಕಳತಜ್ಞ ಡಾ.ಅಮಿತ್‌ ಮಗದುಮ್ ಸೂಕ್ತ ಚಿಕಿತ್ಸೆ ನೀಡಿ ಎರಡೂ ಶಿಶುಗಳು ಆರೋಗ್ಯವಾಗಿ ಬರುವಂತೆ ಮಾಡಿದರು.

ADVERTISEMENT

‘ಸದ್ಯ ಮೊದಲ ಶಿಶು 1,600 ಗ್ರಾಂ ಹಾಗೂ ಎರಡನೇ ಶಿಶು 1,580 ಗ್ರಾಂ ತೂಕ ಹೊಂದಿದ್ದು, ಆರೋಗ್ಯದಲ್ಲಿ ಸ್ಥಿರತೆ ಇದೆ. ಒಂದು ವಾರದಲ್ಲಿ ಶಿಶುಗಳನ್ನು ಮನೆಗೆ ಕಳುಹಿಸಲಾಗುವುದು’ ಎಂದು ಡಾ.ಅಮಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರಿನಂಥ ನಗರಗಳಲ್ಲಿ ಇಂಥ ಹೆರಿಗೆಗಳು ಸಫಲವಾದ ಉದಾಹರಣೆ ಇವೆ. ಚಿಕ್ಕೋಡಿಯಲ್ಲಿ ವಿರಳಾತಿವಿರಳ. ಕೇವಲ ₹3 ಲಕ್ಷದಲ್ಲಿ ಎರಡೂ ಶಿಶುಗಳ ಆರೋಗ್ಯ ಕಾಪಾಡಿದ್ದೇವೆ’ ಎಂದರು.

ಆರೇ ತಿಂಗಳಲ್ಲಿ ಜನಿಸಲು ಕಾರಣ

‘ತಾಯಿಯ ಗರ್ಭಕೋಶದಲ್ಲಿ ನೀರು ತುಂಬಿದ್ದರೆ, ರಕ್ತದೊತ್ತಡ ಹೆಚ್ಚಾಗಿದ್ದರೆ, ರಕ್ತದಲ್ಲಿ ಕೊಬ್ಬಿನಂಶ ಹೆಚ್ಚಿದ್ದರೆ, ಗರ್ಭಾಶಯ ಚೀಲದ ಬಾಯಿ ದೊಡ್ಡದಿದ್ದರೂ ಈ ರೀತಿ ಪ್ರಸವಪೂರ್ವ ಹೆರಿಗೆ ಆಗುತ್ತದೆ’ ಎಂದು ಡಾ.ಸಂಧ್ಯಾ ತಿಳಿಸಿದರು.

‘ಇನ್ಕ್ಯೂಬಿಲೇಟರ್, ವೆಂಟಿಲೇಟರ್ ವ್ಯವಸ್ಥೆ ಮತ್ತು ನುರಿತ ನರ್ಸಿಂಗ್ ಸಿಬ್ಬಂದಿ ಇದ್ದರೆ ಮಾತ್ರ ಇಂಥ ಶಿಶುಗಳನ್ನು ಬದುಕಿಸಲು ಸಾಧ್ಯ. ಶಿಶುಗಳ ಕರುಳ ಬಳ್ಳಿಯನ್ನು 2 ಇಂಚು ಬಿಟ್ಟು ಇದರ ಮೂಲಕ ಶಿಶುಗಳಲ್ಲಿ ಕೊರತೆ ಇರುವ ಅಂಶವನ್ನು ಪೂರೈಸಲಾಗುತ್ತದೆ’ ಎಂದರು.

‘ಗರ್ಭದಲ್ಲಿ ಅವಳಿ ಭ್ರೂಣಗಳು ಇದ್ದ ಕಾರಣ 14 ವಾರಗಳಲ್ಲಿ ಗರ್ಭಾಶಯಕ್ಕೆ ಹೊಲಿಗೆ ಹಾಕಲಾಯಿತು. ಹೊಲಿಗೆ ಹಾಕದಿದ್ದರೆ ಭ್ರೂಣಗಳು ಜಾರಿ ಹೊರಬಿದ್ದು ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಪೂರ್ವಯೋಜನೆಯಂತೆ 26ನೇ ವಾರದಲ್ಲಿ ಹೆರಿಗೆ ಮಾಡಿಸಲಾಗಿದೆ’ ಎಂದು ಅವರು ವಿವರಿಸಿದರು.

ಚಿಕ್ಕೋಡಿಯಲ್ಲಿ ಆರೇ ತಿಂಗಳಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಸಿದ್ದಪ್ಪ– ಅನಿತಾ ದಂಪತಿ ಜತೆಗೆ ಶಿಶುಗಳಿಗೆ ಚಿಕಿತ್ಸೆ ನೀಡಿದ ಡಾ.ಅಮಿತ್‌ ಮಗದುಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.