ADVERTISEMENT

ಉಗರಗೋಳ: ಶಿವಪ್ಪಯ್ಯ ಶಿವಯೋಗಿ ಜಾತ್ರೆ ನಾಳೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 8:36 IST
Last Updated 28 ನವೆಂಬರ್ 2021, 8:36 IST

ಉಗರಗೋಳ: ಗ್ರಾಮದ ಶಿವಪ್ಪಯ್ಯ ಶಿವಯೋಗಿಗಳ ಮಠದ ವಾರ್ಷಿಕ ಜಾತ್ರಾ ಮಹೋತ್ಸವವು ಕಾರ್ತೀಕ ಮಾಸದ ಕೊನೆಯ ಸೋಮವಾರ (ನ.29) ನಡೆಯಲಿದೆ.

ಪ್ರಾತಃಕಾಲದಲ್ಲಿ ಶಿವಪ್ಪಯ್ಯ ಶಿವಯೋಗಿಗಳ ಕರ್ತೃ ಗದ್ದುಗೆಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ, ಮಹಾಮಂಗಳಾರತಿ ನೆರವೇರಲಿದೆ. ಬೆಳಿಗ್ಗೆ 9ಕ್ಕೆ ಶ್ರೀಮಠದಿಂದ ಶಿವಪ್ಪಯ್ಯ ಶಿವಯೋಗಿ ಫೋಟೊ ಹಾಗೂ ಪಲ್ಲಕ್ಕಿ ಉತ್ಸವವು 108 ಕುಂಭಗಳು ಮತ್ತು ವಾದ್ಯಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ.

ಸಂಜೆ 5.30ಕ್ಕೆ ಮಠದ ಆವರಣದಲ್ಲಿ ಲಕ್ಷ ದೀಪೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭ ನಡೆಯಲಿದೆ. ಹೂಲಿ ಸಾಂಬಯ್ಯನವರ ಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಗ್ರಾಮದ ನಿರ್ವಾಣೇಶ್ವರ ಮಠದ ಮಹಾಂತ ಸ್ವಾಮೀಜಿ ಮತ್ತು ರಾಮಾರೂಢ ಮಠದ ಬ್ರಹ್ಮಾರೂಢ ಸ್ವಾಮೀಜಿ, ತಾರಿಹಾಳ ಅಡವಿಸಿದ್ಧೇಶ್ವರ ವಿರಕ್ತಮಠದ ಅಡವಯ್ಯ ದೇವರು, ರೇಣುಕಾ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಸಾನ್ನಿಧ್ಯ ವಹಿಸುವರು. ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಉದ್ಘಾಟಿಸುವರು.

ADVERTISEMENT

ಕುಸ್ತಿ ಪಂದ್ಯಗಳಲ್ಲಿ ಸಾಧನೆ ತೋರಿದ ಮೇದಾಸಾಬ ಬೇವಿನಗಿಡದ, ಗಣಪತಿಗೌಡ ಚನ್ನಪ್ಪಗೌಡರ, ಮುಸ್ತಿಕಆಲಂ ಬೇವಿನಗಿಡದ, ನಿಂಗಪ್ಪ ಅಳಗೋಡಿ, ಮಕ್ತುಂಹುಸೇನ ಬಾರಿಗಿಡದ, ಮಾರುತಿ ಕುಂಟೋಜಿ, ಮಂಜು ಗೊರವನಕೊಳ್ಳ, ರವಿ ಅತ್ತಿಗೇರಿ, ರಾಜು ಹೆಬ್ಬಳ್ಳಿ, ಬುಡನ್ ಸಾಬ ಹೊಸಮನಿ ಅವರನ್ನು ಸನ್ಮಾನಿಸಲಾಗುವುದು ಎಂದು ಮಠದ ಆಡಳಿತ ಮಂಡಳಿಯ ಸಿಇಒ ಮಹೇಶ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.