ADVERTISEMENT

ಇದು ‘ಉತ್ತಮ ನಲಿ–ಕಲಿ’ ಶಾಲೆ

ಮಾದರಿಯಾದ ಉಳ್ಳಾಗಡ್ಡಿವಾಡಿ ಸರ್ಕಾರಿ ಶಾಲೆ

ಸುಧಾಕರ ಎಸ್.ತಳವಾರ, ಬೆಂಗಳೂರು
Published 25 ಅಕ್ಟೋಬರ್ 2019, 19:30 IST
Last Updated 25 ಅಕ್ಟೋಬರ್ 2019, 19:30 IST
ಮಕ್ಕಳಿಗೆ ಆಟದೊಂದಿಗೆ ಪಾಠ ಬೋಧನೆ ಮಾಡುತ್ತಿರುವ ಶಿಕ್ಷಕರು
ಮಕ್ಕಳಿಗೆ ಆಟದೊಂದಿಗೆ ಪಾಠ ಬೋಧನೆ ಮಾಡುತ್ತಿರುವ ಶಿಕ್ಷಕರು   

ಚಿಕ್ಕೋಡಿ: ಕಲಿಕೆಯಲ್ಲಿ ವಿನೂತನ ಪ್ರಯೋಗಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಗಮನಸೆಳೆದಿರುವ ಈ ಗ್ರಾಮೀಣ ಶಾಲೆ ‘ಉತ್ತಮ ನಲಿ ಕಲಿ’ ಶಾಲೆ ಎಂಬ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ.

ತಾಲ್ಲೂಕಿನ ಯಕ್ಸಂಬಾ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಉಳ್ಳಾಗಡ್ಡಿವಾಡಿಯ ಕಿರಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯೇ ಈ ಸಾಧನೆ ಮಾಡಿದೆ.800 ಜನಸಂಖ್ಯೆ ಹೊಂದಿರುವ ಅಲ್ಲಿ 1967ರಲ್ಲಿ ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸ್ಥಾಪನೆಯಾಗಿದೆ. ಕೇಸ್ತೆ ಮತ್ತು ಖೋತ್ ಕುಟುಂಬದವರು ದಾನವಾಗಿ ನೀಡಿದ 7 ಗುಂಟೆ ಭೂಮಿಯಲ್ಲಿ ಕಟ್ಟಡ ನಿರ್ಮಿಸಲಾಗಿದೆ. 1ರಿಂದ 5ನೇ ತರಗತಿವರೆಗೆ 30 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ಶಿಕ್ಷಕರ ಪ್ರಯತ್ನದಿಂದ:

ADVERTISEMENT

ಆರಂಭವಾದಾಗ ಮಕ್ಕಳ ಸಂಖ್ಯೆ ಹೆಚ್ಚಿತ್ತು. ಇತ್ತೀಚಿನ ವರ್ಷಗಳಲ್ಲಿ ಕಾನ್ವೆಂಟ್‌ಗಳತ್ತ ಪೋಷಕರು ಆಕರ್ಷಿತವಾದ್ದರಿಂದ ದಾಖಲಾತಿ ಕುಸಿದಿತ್ತು. ಇತ್ತೀಚೆಗೆ ಶಿಕ್ಷಕರ ಪ್ರಯತ್ನದ ಫಲವಾಗಿ, ಮಕ್ಕಳ ದಾಖಲಾತಿ ಸಂಖ್ಯೆ 20ರಿಂದ 30ಕ್ಕೆ ಏರಿದೆ. ಇದು ಗ್ರಾಮಸ್ಥರ ಮೆಚ್ಚುಗೆಗೂ ಪಾತ್ರವಾಗಿದೆ.

ಶಾಲೆಯತ್ತ ಮಕ್ಕಳನ್ನು ಸೆಳೆಯಲು ಚಟುವಟಿಕೆಯುಕ್ತ ಕಲಿಕೆಗೆ ಶಿಕ್ಷಕರು ಆದ್ಯತೆ ನೀಡಿದ್ದಾರೆ. ನಲಿ– ಕಲಿ ಶಿಕ್ಷಣದ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿರುವ ಶಿಕ್ಷಕ ಮಹೇಶ ಮಗದುಮ್ ಮತ್ತು ಸಹ ಶಿಕ್ಷಕ ಶಾಂತಿನಾಥ ಹತ್ತಿಯವರ ಅವರು ಪಾಲಕರು ಹಾಗೂ ಸಮುದಾಯ ಸಹಭಾಗಿತ್ವದೊಂದಿಗೆ ‘ಸ್ಮಾರ್ಟ್‌ ಕ್ಲಾಸ್’ ರೂಪಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಕಲಿಸುತ್ತಿದ್ದಾರೆ.

ಟಿವಿಯಲ್ಲಿ ಬಗೆ ಬಗೆಯ ಕಥೆ, ಹಾಡು, ರೂಪಕಗಳನ್ನು ಪ್ರದರ್ಶಿಸುವ ಮೂಲಕ ಮಕ್ಕಳಿಗೆ ಅಕ್ಷರ ಜ್ಞಾನ, ಸಾಮಾನ್ಯ ಜ್ಞಾನ, ನೈತಿಕ ಮೌಲ್ಯಗಳು ಮತ್ತು ಸಂಸ್ಕಾರ ಕಲಿಸುತ್ತಿದ್ದಾರೆ. ನಿತ್ಯವೂ ಮಕ್ಕಳು ನಾಡಗೀತೆ, ರಾಷ್ಟ್ರಗೀತೆಗಳನ್ನು ಟ್ರ್ಯಾಕ್ ಮೂಲಕ ಹಾಡುತ್ತಾರೆ. ಪರದೆ ಮೇಲೆ ನೆರಳು ಬೆಳಕಿನಾಟದ ಕಲೆಯನ್ನೂ ಮಕ್ಕಳಿಗೆ ಕಲಿಸಲಾಗಿದೆ. ಮಕ್ಕಳು ಬೆರಳುಗಳಿಂದ ಪರದೆ ಮೇಲೆ ಪ್ರಾಣಿ, ಪಕ್ಷಿ, ಮಹಾತ್ಮರು ಹಾಗೂ ಗೀತೆಗಳಿಗೆ ತಕ್ಕ ಚಿತ್ರಗಳನ್ನು ನೆರಳು ಬೆಳಕಿನಲ್ಲಿ ಮೂಡಿಸಿ ಮುದ ನೀಡುತ್ತಾರೆ.

ಪ್ರೋತ್ಸಾಹಧನ ವಿತರಣೆ:

ಗ್ರಾಮದ ಶಿವಾಜಿ ರಾಯಜಾಧವ, ಸುಭಾಷ ರಾಯಜಾಧವ, ಏಕನಾಥ ರಾಯಜಾಧವ, ಪುರುಷೋತ್ತಮ ರಾಯಜಾಧವ, ಬಾಳಕೃಷ್ಣ ರಾಯಜಾಧವ, ರಂಜತ್‌ ರಾಯಜಾಧವ, ಪ್ರಭಾಕರ ಖೋತ್, ಸುರೇಶ ಖೋತ್, ಬಾಳು ಮಾಳಿ, ಉಮೇಶ ಡೊಂಗರೆ, ಮಹಾದೇವ ಬಾಕಳೆ, ಅನ್ನಪ್ಪ ಖೋತ್ ಅವರು ಶಾಶ್ವತ ನಿಧಿಯನ್ನು ಬ್ಯಾಂಕಲ್ಲಿಟ್ಟಿದ್ದಾರೆ. ಅದರ ಬಡ್ಡಿ ಹಣದಲ್ಲಿ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಪ್ರತಿ ವರ್ಷ ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ.

ಶಾಲೆಯ ಹಳೆಯ ವಿದ್ಯಾರ್ಥಿನಿ ರೂಪಾಲಿ ಖೋತ್ 30 ಮಕ್ಕಳಿಗೆ ಟ್ರ್ಯಾಕ್ ಪ್ಯಾಂಟ್ ಹಾಗೂ ಟಿ–ಶರ್ಟ್‌ಗಳನ್ನು ದೇಣಿಗೆ ನೀಡಿದ್ದಾರೆ. ಬಾಳೇಶ ಖೋತ್ ಶಾಲೆಯ ವೇದಿಕೆಗೆ ಬಣ್ಣದ ಚಿತ್ತಾರ ಮಾಡಿಸಿಕೊಟ್ಟಿದ್ದಾರೆ.

‘ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಉಳ್ಳಾಗಡ್ಡಿವಾಡಿ ಶಾಲೆ ಶಿಕ್ಷಕರು ಮನೆಗಳಿಗೆ ತೆರಳಿ ಪಾಲಕರ ಮನವೊಲಿಸಿ ಮಕ್ಕಳ ದಾಖಲಾತಿ ಹೆಚ್ಚಿಸುತ್ತಿದ್ದಾರೆ. ಕೊಠಡಿಯೊಂದು ಶಿಥಿಲಗೊಂಡಿದ್ದು, ಹೊಸದಾಗಿ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎನ್ನುವುದು ಪಾಲಕರ ಕೋರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.