
ಬೆಳಗಾವಿ: ಬೆಂಗಳೂರಿನಿಂದ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ಬಂದಿಳಿದ ಇಂಡಿಗೊ ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸಿದ 20ಕ್ಕೂ ಅಧಿಕ ಪ್ರಯಾಣಿಕರ ಲಗೇಜ್‌ಗಳನ್ನು ಬೆಂಗಳೂರಿನಲ್ಲೇ ಬಿಟ್ಟುಬರಲಾಗಿತ್ತು.
ಬೆಂಗಳೂರಿನಿಂದ ಸಂಜೆ 5.55ಕ್ಕೆ ಹೊರಟ ವಿಮಾನ, ರಾತ್ರಿ 7.25ಕ್ಕೆ ಇಲ್ಲಿಗೆ ಬಂದು ತಲುಪಿತು. ಆದರೆ, ತಮ್ಮ ಲಗೇಜ್‌ಗಳು ಬಾರದ ಹಿನ್ನೆಲೆಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಸೇರಿದಂತೆ 20ಕ್ಕೂ ಅಧಿಕ ಪ್ರಯಾಣಿಕರು ಪರದಾಡಿದರು. ವಿಮಾನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
‘ಈ ವಿಮಾನದಲ್ಲಿ ಮಲೇಷಿಯಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿದ್ದರು. ಅವರ ಬ್ಯಾಗ್ ಹೆಚ್ಚಿನ ಭಾರವಿರುವ ಕಾರಣಕ್ಕೆ, ನಮ್ಮ ಬ್ಯಾಗ್ ಬಿಟ್ಟುಬರಲಾಗಿದೆ. ನಮ್ಮಲ್ಲಿ ಹಲವರು ಹಿರಿಯ ನಾಗರಿಕರಿದ್ದಾರೆ. ಅವರ ಔಷಧ, ಅಗತ್ಯ ವಸ್ತುಗಳು ಅದರಲ್ಲಿವೆ. ವಿಮಾನ ಸಿಬ್ಬಂದಿ ಬೇಜವಾಬ್ದಾರಿಯಿಂದ ನಾವು ತೊಂದರೆ ಅನುಭವಿಸುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ವಿಮಾನ ಟೇಕಾಫ್ ಆಗುವ ಕೆಲವೇ ನಿಮಿಷ ಮುನ್ನ, ಪ್ರಯಾಣಿಕರ ಲಗೇಜ್‌ಗಳ ಭಾರ ಹೆಚ್ಚಾಗಿರುವುದು ಗೊತ್ತಾಗಿದೆ. ಹಾಗಾಗಿ ಹೆಚ್ಚುವರಿ ಲಗೇಜ್ ಬಿಟ್ಟುಬರಲಾಗಿದೆ. ಮುಂಚಿತವಾಗಿ ಮಾಹಿತಿ ನೀಡಿದರೆ ಪ್ರಯಾಣಿಕರು ಆತಂಕಗೊಳ್ಳುವ ಕಾರಣ, ಈಗ ಮಾಹಿತಿ ಕೊಡಲಾಗಿದೆ. ಸೋಮವಾರ ಬೆಳಿಗ್ಗೆ ಬರಲಿರುವ ಮೊದಲ ವಿಮಾನದಲ್ಲಿ ಎಲ್ಲ ಲಗೇಜ್‌ಗಳನ್ನು ತರಿಸಿ, ಪ್ರಯಾಣಿಕರ ಮನೆಗೇ ತಲುಪಿಸಲಾಗುವುದು’ ಎಂದು ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ ಎಸ್.ತ್ಯಾಗರಾಜನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಂಗಳೂರಿನಿಂದ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ಬಂದಿಳಿದ ಇಂಡಿಗೊ ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸಿದ 20ಕ್ಕೂ ಅಧಿಕ ಪ್ರಯಾಣಿಕರ ಲಗೇಜ್ ಅನ್ನು ಬೆಂಗಳೂರಿನಲ್ಲೇ ಬಿಟ್ಟು ಬಂದಿರುವ ಘಟನೆ ನಡೆದಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.