ADVERTISEMENT

ಯೋಜನೆಗಳ ಅನುಷ್ಠಾನ ಪಾರದರ್ಶಕವಾಗಿರಲಿ: ಕೇಂದ್ರ ಸಚಿವ ಸೋಮಪ್ರಕಾಶ್ ತಾಕೀತು 

ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 11:03 IST
Last Updated 28 ಜೂನ್ 2022, 11:03 IST
ಪ್ರಗತಿ ಪರಿಶೀಲನೆ ಸಭೆ (ಸಾಂದರ್ಭಿಕ ಚಿತ್ರ)
ಪ್ರಗತಿ ಪರಿಶೀಲನೆ ಸಭೆ (ಸಾಂದರ್ಭಿಕ ಚಿತ್ರ)   

ಬೆಳಗಾವಿ: ‘ಸರ್ಕಾರದ ಯೋಜನೆಗಳ‌ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಮೂಲಕ ಬಡವರು ಮತ್ತು ಅರ್ಹರಿಗೆ ಸೌಲಭ್ಯಗಳನ್ನು ತಲುಪಿಸಬೇಕು. ಅವರ ಬಾಳಿನಲ್ಲಿ ಬದಲಾವಣೆ ತರಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸೋಮ ಪ್ರಕಾಶ್ ತಾಕೀತು ಮಾಡಿದರು.

ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸ್ಮಾರ್ಟ್ ಸಿಟಿ ಮಿಷನ್ ಅಡಿ ಕೊಳಚೆಪ್ರದೇಶಗಳಲ್ಲಿ ರಸ್ತೆ, ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ವಸತಿ ಸೌಕರ್ಯಗಳನ್ನು ಒದಗಿಸಲು ಹೆಚ್ಚು ಆದ್ಯತೆ ನೀಡಬೇಕು. ಯೋಜನೆಯ ಅನುಷ್ಠಾನದಿಂದ ಬಡವರ ಜೀವನಶೈಲಿಯಲ್ಲಿ ಸುಧಾರಣೆಯಾಗಬೇಕು. ಸಾಮಾನ್ಯವಾಗಿ ಮುದ್ರಾ ಯೋಜನೆಯಡಿ ಸಾಲ ಮಂಜೂರು ಮಾಡಲು ಬ್ಯಾಂಕುಗಳು ಸಹಕರಿಸುವುದಿಲ್ಲ ಎಂಬ ದೂರುಗಳು ಎಲ್ಲೆಡೆ ಇದೆ. ಸಹಕಾರ ನೀಡದ ಬ್ಯಾಂಕುಗಳಿಗೆ ಸೂಕ್ತ ಎಚ್ಚರಿಕೆ ನೀಡಬೇಕು’ಎಂದು ಸೂಚಿಸಿದರು.

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ, ಒನ್ ನೇಷನ್ ಒನ್ ರೇಷನ್ ,ಪ್ರಧಾನ ಮಂತ್ರಿ ಮಾತೃ ವಂದನ,ಆವಾಸ್ ಯೋಜನೆ, ಉಜ್ವಲ, ಗರೀಬ್ ಕಲ್ಯಾಣ ಅನ್ನ ಯೋಜನೆ, ಪೋಷಣ ಅಭಿಯಾನ,ಮುದ್ರಾ ಯೋಜನೆ, ಸ್ವಚ್ಛ ಭಾರತ ಮಿಷನ್, ಪ್ರಧಾನಮಂತ್ರಿ ಸ್ವನಿಧಿ ಮತ್ತಿತರ ಯೋಜನೆಗಳ ಪ್ರಗತಿ ಪರಿಶೀಲಿಸಿದರು.

ADVERTISEMENT

ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ ನಗರದ ಅಭಿವೃದ್ಧಿಗೆ ₹ 1000 ಕೋಟಿ ಮಂಜೂರಾಗಿದೆ. ಈಗಾಗಲೇ ₹ 600 ಕೋಟಿಗಳಿಗೂ ಅಧಿಕ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು 2023 ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದರು.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ಯರಗಟ್ಟಿಯು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರುವ ಮುನ್ನ ಮಂಜೂರಾಗಿರುವ ಜಲಜೀವನ‌ ಮಿಷನ್ ಯೋಜನೆ ಪೂರ್ಣಗೊಳಿಸಿ, ಮನೆ ಮನೆಗೆ ನಳದ ಸಂಪರ್ಕ ಕಲ್ಪಿಸುವ ಕಾಮಗಾರಿ ತ್ವರಿತಗೊಳಿಸಬೇಕು ಎಂದರು.

ಸಂಸದೆ ಮಂಗಲಾ ಸುರೇಶ ಅಂಗಡಿ ಮಾತನಾಡಿ, ಜಿಲ್ಲೆಯಲ್ಲಿ ಜಲಜೀವನ ಮಿಷನ್ ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಹಾಗೂ ಉದ್ಘಾಟನೆ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಗಳು ಕಾಲ ಕಾಲಕ್ಕೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಮೊದಲ ಹಂತದ 20 ನಗರಗಳಲ್ಲಿ ಬೆಳಗಾವಿ ನಗರ ಆಯ್ಕೆಯಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳಿಗೆ ಕಾರ್ಡುಗಳ ವಿತರಣೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ನಡೆಯುತ್ತಿದೆ.

ಜಿ.ಪಂ ಸಿಇಒ ದರ್ಶನ್ ಎಚ್.ವಿ. ಮಾತನಾಡಿ, ಜಿಲ್ಲೆಯಲ್ಲಿ ಜಲಜೀವನ ಮಿಷನ್ ಅನುಷ್ಠಾನದ ಪ್ರಗತಿ ಮಾಹಿತಿ ಸಭೆಗೆ ವಿವರಿಸಿದರು.

ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ದೊಡ್ಡಗೌಡ್ರ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್ ಹುಸೇನ್ ಪಠಾಣ, ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಬಸಂತ್ ಗರ್ಗ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.