ಬೆಳಗಾವಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ (ಕ್ರೈಸ್) ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳ ವಸತಿ ಶಾಲೆಗಳಿಗೆ ‘ಶುಚಿ ಸಂಭ್ರಮ’ ಕಿಟ್ ಪೂರೈಕೆಯಾಗಿಲ್ಲ. ಶೈಕ್ಷಣಿಕ ವರ್ಷ ಆರಂಭಗೊಂಡು ಎರಡು ತಿಂಗಳಾದರೂ ಕಿಟ್ ಲಭ್ಯವಾಗದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಕ್ರೈಸ್ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಓದುವ ಬಾಲಕರು ಮತ್ತು ಬಾಲಕಿಯರಿಗೆ ಬ್ರಷ್, ಟೂಥ್‌ಪೇಸ್ಟ್, ಮೈ ಸೋಪು, ಬಟ್ಟೆ ಸೋಪು, ಕೊಬ್ಬರಿ ಎಣ್ಣೆ, ಪೌಡರ್ ಒಳಗೊಂಡ ‘ಶುಚಿ ಸಂಭ್ರಮ ಕಿಟ್’ ಅನ್ನು ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ವತಿಯಿಂದ ಪ್ರತಿ ತಿಂಗಳು ಪೂರೈಸಲಾಗುತ್ತಿತ್ತು. ಹಿಂದಿನ ವರ್ಷಗಳಲ್ಲಿ ನಿಯಮಿತವಾಗಿ ಕೈಗೆಟುಕುತ್ತಿತ್ತು. ಆದರೆ, ಕಳೆದ ವರ್ಷದಿಂದ ಪೂರೈಕೆಯಲ್ಲಿ ವಿಳಂಬವಾಗಿದೆ.
‘ಈ ಬಾರಿ ಜೂನ್‌ನಲ್ಲಿ ವಸತಿ ಶಾಲೆ ಆರಂಭವಾಗಿವೆ. ಈ ಸಲದ ಕಿಟ್ ಬಂದಿಲ್ಲ. ಕಳೆದ ವರ್ಷವೂ ಕೆಲ ಜಿಲ್ಲೆಗಳಲ್ಲಿ ಐದಾರು ತಿಂಗಳ ಕಿಟ್ ಇನ್ನೂ ಪೂರೈಕೆಯಾಗಲಿಲ್ಲ’ ಎಂಬುದು ವಿದ್ಯಾರ್ಥಿಗಳ ದೂರು.
2.11 ಲಕ್ಷ ವಿದ್ಯಾರ್ಥಿಗಳು:
‘ರಾಜ್ಯದಲ್ಲಿ 821 ವಸತಿ ಶಾಲೆಗಳಿವೆ. ಅಲ್ಲಿ ಓದುತ್ತಿರುವ 80,835 ಬಾಲಕರು, 1,30,895 ಬಾಲಕಿಯರು ಸೇರಿ 2,11,730 ವಿದ್ಯಾರ್ಥಿಗಳಿಗೆ ‘ಶುಚಿ ಸಂಭ್ರಮ ಕಿಟ್’ ವಿತರಿಸುತ್ತಿದ್ದೇವೆ. ಬಾಲಕರ ಪ್ರತಿ ಕಿಟ್‌ನ ದರ ₹114.22, ಬಾಲಕಿಯರ ಕಿಟ್‌ನ ದರ ₹152.22 ಇದೆ. ಕಳೆದ ವರ್ಷ 16 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಕಿಟ್ ವಿತರಣೆಯಾಗಿದೆ. ಅನುದಾನ ಕೊರತೆ ಮೊದಲಾದ ಕಾರಣಗಳಿಂದ ಕೆಲವು ಜಿಲ್ಲೆಗಳಲ್ಲಿ ವಿತರಿಸಲಾಗಿಲ್ಲ’ ಎಂದು ಕ್ರೈಸ್ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ದಕ್ಷಿಣ ಕರ್ನಾಟಕದ ಜಿಲ್ಲೆಗಳ ವಸತಿ ಶಾಲೆಗಳಿಗೆ ‘ಶುಚಿ ಸಂಭ್ರಮ ಕಿಟ್’ ವಿತರಣೆ ಈಗ ಆರಂಭವಾಗಿದೆ. ಹಂತಹಂತವಾಗಿ ಎಲ್ಲ ಜಿಲ್ಲೆಗಳಿಗೂ ತ್ವರಿತವಾಗಿ ತಲುಪಲಿವೆ.ಮಾಯಾದೇವಿ ಗಲಗಲಿ, ಜಂಟಿ ನಿರ್ದೇಶಕಿ (ಆಡಳಿತ), ಕ್ರೈಸ್, ಬೆಂಗಳೂರು
‘ಚಿಕ್ಕೋಡಿ ತಾಲ್ಲೂಕಿನ ವಸತಿ ಶಾಲೆಯಲ್ಲಿ ನನ್ನ ಮಗಳು 9ನೇ ತರಗತಿ ಓದುತ್ತಾಳೆ. ಅವಳಿಗೆ ಸಕಾಲಕ್ಕೆ ಶುಚಿ ಸಂಭ್ರಮ ಕಿಟ್ ಕೊಡುತ್ತಿಲ್ಲ. ಹಾಗಾಗಿ ಸ್ವಂತ ಹಣದಿಂದ ಮೈ ಸಾಬೂನು, ಬಟ್ಟೆ ಸಾಬೂನು, ಕೊಬ್ಬರಿ ಎಣ್ಣೆ, ಪೌಡರ್ ಕೊಡಿಸಿದ್ದೇನೆ. ಬಡತನದ ಮಧ್ಯೆ ಈ ವೆಚ್ಚ ಹೊರೆಯಾಗುತ್ತಿದೆ’ ಎಂದು ಗೋಕಾಕದ ಉದಯಕುಮಾರ ಹೇಳಿದರು.
‘ನಾವು ಹೆತ್ತವರಿಂದ ದೂರ ಇದ್ದುಕೊಂಡು ಕಲಿಯುತ್ತೇವೆ. ನಿಯಮಿತವಾಗಿ ಕಿಟ್ ವಿತರಿಸಿದರೆ, ನಾವು ಶುಚಿಯಾಗಿರಲು ಸಾಧ್ಯ’ ಎನ್ನುತ್ತಾರೆ ವಿದ್ಯಾರ್ಥಿಗಳು.
‘ಜೂನ್‌ನಿಂದ ನವೆಂಬರ್‌ಗೆ ಬರಬೇಕು’
‘ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ 54 ವಸತಿ ಶಾಲೆಗಳಿವೆ. 2023–24ನೇ ಸಾಲಿನಲ್ಲಿ ಡಿಸೆಂಬರ್‌ನಿಂದ ಮಾರ್ಚ್‌ವರೆಗಿನ ಅವಧಿಯ ಕಿಟ್ ನೀಡಲಾಗಿದೆ. ಜೂನ್‌ನಿಂದ ನವೆಂಬರ್‌ವರೆಗಿನ ಅವಧಿಯ ಕಿಟ್ ಪೂರೈಕೆಯಾಗಬೇಕಿದೆ. 2024–25ರಲ್ಲಿ ಜೂನ್, ಜುಲೈ ತಿಂಗಳ ಕಿಟ್ ಬರಬೇಕಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಜಂಟಿನಿರ್ದೇಶಕ ನವೀನ ಶಿಂತ್ರೆ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.