ADVERTISEMENT

ಸವದತ್ತಿ | ಉದ್ದು ಖರೀದಿಸದ ಸಿಬ್ಬಂದಿ: ರೈತರ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 3:00 IST
Last Updated 28 ನವೆಂಬರ್ 2025, 3:00 IST
ಸವದತ್ತಿ ಉಗ್ರಾಣ ಕೇಂದ್ರದಲ್ಲಿ ಉದ್ದು ಖರೀದಿಸುತ್ತಿಲ್ಲವೆಂದು ಆರೋಪಿಸಿ ರೈತರು ಎಪಿಎಎಂಸಿ ವೃತ್ತದಲ್ಲಿ ಟ್ರ್ಯಾಕ್ಟರಗಳನ್ನು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟಿಸಿದರು 
ಸವದತ್ತಿ ಉಗ್ರಾಣ ಕೇಂದ್ರದಲ್ಲಿ ಉದ್ದು ಖರೀದಿಸುತ್ತಿಲ್ಲವೆಂದು ಆರೋಪಿಸಿ ರೈತರು ಎಪಿಎಎಂಸಿ ವೃತ್ತದಲ್ಲಿ ಟ್ರ್ಯಾಕ್ಟರಗಳನ್ನು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟಿಸಿದರು    

ಸವದತ್ತಿ: ಇಲ್ಲಿನ ಕೇಂದ್ರ ಉಗ್ರಾಣದ ಸಿಬ್ಬಂದಿ ಉದ್ದು ಖರೀದಿಸುತ್ತಿಲ್ಲವೆಂದು ಆರೋಪಿಸಿ ರೈತರು ಎಪಿಎಎಂಸಿ ವೃತ್ತದಲ್ಲಿ ಗುರುವಾರ 6 ಗಂಟೆ ರಸ್ತೆ ತಡೆದು ಉದ್ದು ತಂದ ಟ್ರ್ಯಾಕ್ಟರಗಳನ್ನೇ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟಿಸಿದರು.

ಸಂಗ್ರೇಶಕೊಪ್ಪದ ರೈತ ಅರವಿಂದ ಯಂಕರಡ್ಡಿ ಮಾತನಾಡಿ, ಅಕಾಲಿಕ ಮಳೆ, ಅನಾವೃಷ್ಠಿ ಸೇರಿ ಅನೇಕ ಸಮಸ್ಯೆಗಳಿಂದ ನಲುಗಿದ ರೈತರಿಗೆ ಟಿಎಪಿಸಿಎಂಎಸ್ ನಲ್ಲಿ ಖರೀದಿಸಿದ ಉದ್ದು ಬೆಳೆಯನ್ನು ಉಗ್ರಾಣ ಕೇಂದ್ರದಲ್ಲಿ ತಿರಸ್ಕರಿಸುತ್ತಿದ್ದರಿಂದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ ಎಂದರು.

ಸರ್ಕಾರ ರೈತರ ಅನುಕೂಲಕ್ಕಾಗಿ ನ್ಯಾಯಯುತ ಬೆಲೆ ನಿಗದಿ ಮಾಡಿ ಹಲವೆಡೆ ಖರೀದಿ ಕೇಂದ್ರ ಆರಂಭಿಸಿದೆ. ಆದರೆ ಇಲ್ಲಿನ ಟಿಎಪಿಸಿಎಂಎಸ್‌ನಲ್ಲಿರುವ ಖರೀದಿ ಕೇಂದ್ರದಲ್ಲಿ ಗರಿಷ್ಠ ಶೇ 12 ಒಣಗಿದ ಹಾಗೂ ಶೇ 2-3 ಮಣ್ಣು ಮಿಶ್ರಿತ ಸೇರಿ ಎಲ್ಲ ಮಾನದಂಡಗಳನ್ನು ಅನುಸರಿಸಿ ಖರೀದಿ ಕೊಟ್ಟ ಬಳಿಕ ರೈತರೇ ಇದನ್ನು ಮತ್ತೆ ಉಗ್ರಾಣಕ್ಕೆ ತೆಗೆದುಕೊಂಡು ಹೋದರೆ ತಿರಸ್ಕಾರ ಮಾಡಲಾಗುತ್ತಿದೆ. ಖರೀದಿ ವೇಳೆ ಮಾನದಂಡ ಸೂಚಿಸಲು ಉಗ್ರಾಣ ಸಿಬ್ಬಂದಿ ನೇಮಿಸಿಲ್ಲ. ಜೊತೆಗೆ ಏನೆಲ್ಲ ತಿಳಿಹೇಳಲು ರೈತ ಪ್ರಯತ್ನಿಸಿದರೂ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಾರೆ. ಖರೀದಿ ಕೇಂದ್ರ, ಎಪಿಎಂಸಿ, ಉಗ್ರಾಣ ಇವು ಒಂದೇ ಆವರಣದಲ್ಲಿ ಇದ್ದಲ್ಲಿ ರೈತರಿಗೆ ಪರದಾಟ ತಪ್ಪಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್‌ ಎಂ.ಎನ್. ಹೆಗ್ಗನ್ನವರ ಭೇಟಿ ನೀಡಿ, ಉಗ್ರಾಣದ ಸಿಬ್ಬಂದಿ ಜೊತೆ ಚರ್ಚಿಸಿ ರೈತರಿಗೆ ಬೇಕಿರುವ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

ಬಸವರಾಜ ಬಿಜ್ಜೂರ, ಸಿಂಧೂರ ತೆಗ್ಗಿ, ಯಲ್ಲಪ್ಪ ಗಾಣಿಗೇರ, ರಾಜು ಕಂಬಾರ, ಸುನೀಲ ತೊರಗಲ್ಲ, ಆನಂದ ರೆಡ್ಡಿ, ಮಹೇಶ ಬಾಗಲ, ಅಶೋಕ ಯಂಕರಡ್ಡಿ, ರಾಘವೇಂದ್ರ ಸಂಗ್ರೇಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.