ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
ಹಡೆದೊಡವೆ ವಸ್ತುವನು ಮೃಢಭಕ್ತರಿಗಲ್ಲದೆ
ಕಡಬಡ್ಡಿಯ ಕೊಡಲಾಗದು.
ಬಂದಡೊಂದು ಲೇಸು, ಬಾರದಿದ್ದಡೆ ಲೇಸು
ಅಲ್ಲಿದ್ದಡೆಯೂ ಲಿಂಗಕ್ಕೆ ಬೋನ, ಇಲ್ಲಿದ್ದಡೆಯೂ ಲಿಂಗಕ್ಕೆ ಬೋನ
ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ
ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ.
ಇದು ಕಾರಣ ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ ಕಡಬಡ್ಡಿಯ ಕೊಡಲಾಗದು.
ಬಸವಾದಿ ಶಿವಶರಣರ ಆಶಯಗಳು ಸರ್ವಕಾಲಕ್ಕೂ ಸಲ್ಲುವಂತಹವು. ಕಾಯಕ, ದಾಸೋಹ, ಸಮಾನತೆಯೇ ಅವರ ತತ್ವಗಳಾಗಿವೆ. ನಾವು ದುಡಿದು ಗಳಿಸಿದ ಹಣವನ್ನು ವ್ಯರ್ಥಗೊಳಿಸದೆ, ಸಮಾಜಕ್ಕಾಗಿ ಬಳಸಬೇಕು. ಅದರ ಫಲ ಬಂದರೂ, ಬಾರದಿದ್ದರೂ ದುಃಖಕ್ಕೆ ಒಳಗಾಗಬಾರದು ಎಂದು ಬಸವಣ್ಣನವರು ಈ ವಚನದಲ್ಲಿ ತಿಳಿಸಿದ್ದಾರೆ.
ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುವ ಭಕ್ತರಿಗೆ ನಾವು ದುಡಿದ ಗಳಿಸಿದ ಹಣ ನೀಡಬೇಕು. ಭಕ್ತರು ಮಾಡುವ ಈ ಸೇವೆ ಸಕಲರಿಗೂ ಉಪಕಾರಿಯಾಗಿರುತ್ತದೆ. ಅವರಿಗೆ ನೀಡುವ ದಾಸೋಹ ವ್ಯರ್ಥವಾಗುವುದಿಲ್ಲ. ‘ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ’ ಎಂಬುದು ಸದ್ಭಾವನೆಯಿಂದ ಗಳಿಸಿದ ಸಂಪತ್ತು, ಎಲ್ಲಿದ್ದರೂ ಭಗವಂತನ ಸಂಪತ್ತೇ ಆಗಿದೆ ಎಂಬ ಅರ್ಥ ತಿಳಿಸುತ್ತದೆ. ನಮ್ಮ ಹಣದ ಕುರಿತು ಆಲೋಚನೆ ಮಾಡದೆ ಸಮಾಜಕ್ಕೆ ಅದನ್ನು ಬಳಸಬೇಕು ಎಂಬುದು ಇಲ್ಲಿನ ತಾತ್ಪರ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.