ADVERTISEMENT

ಬುದ್ಧಿಯ ಮಾತನ್ನು ಕೇಳಿರಿ

​ಪ್ರಜಾವಾಣಿ ವಾರ್ತೆ
Published 18 ಮೇ 2022, 9:45 IST
Last Updated 18 ಮೇ 2022, 9:45 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

––––––––

ತಾಳೆ ಮರದ ಕೆಳಗೆ ಒಂದು ಹಾಲ ಹರವಿಯಿದ್ದಡೆ

ADVERTISEMENT

ಅದ ಹಾಲಹರವಿಯೆನ್ನರು; ಸುರೆಯ ಹರವಿಯೆಂಬರು

ಈ ಭಾವ ನಿಂದೆಯ ಮಾಣಿಸಾ ಕೂಡಲಸಂಗಮದೇವಾ

ನಾವು ನೋಡುವ ರೀತಿಯಲ್ಲಿ ಜಗತ್ತು ಇರುವುದಿಲ್ಲ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆ ಮಾತೇ ಇದೆ. ತಾಳೆ ಮರದ ಕೆಳಗೆ ಒಂದು ಹಾಲಿನ ಮಡಕೆಯನ್ನು ಇಟ್ಟಾಗ ನೋಡುವ ಜನರೆಲ್ಲ ಅದನ್ನು ಸುರೆಯ ಮಡಕೆ ಎನ್ನುತ್ತಾರೆ. ವಾಸ್ತವವಾಗಿ ಅದು ಹಾಲಿನ ಮಡಕೆ ಎಂಬುದು ಅದರಲ್ಲಿರುವುದರ ರುಚಿಯನ್ನು ನೋಡಿದಾಗಷ್ಟೆ ತಿಳಿಯುತ್ತದೆ. ನಮ್ಮ ಸುತ್ತಮುತ್ತಲಿರುವ ಜನರು ಕೂಡ ಮನಸ್ಸಿನಲ್ಲಿ ಒಂದು ಹೊರಗಡೆ ಒಂದು ರೀತಿಯಲ್ಲಿ ವಿಚಾರಿಸುತ್ತಾರೆ. ಮನದ ವಿಚಾರವನ್ನು ಸರಿಯಾದ ರೀತಿಯಲ್ಲಿ ವಾಸ್ತವಕ್ಕೆ ತರುವುದು ಬಹುಮುಖ್ಯವಾದುದು. ಚಂಚಲವಾಗಿರುವ ಮನಸ್ಸು ಮನುಷ್ಯನ ಆಲೋಚನಾ ವಿಧಾನವನ್ನೇ ಬದಲಿಸುವುದರಿಂದ, ಮನದ ಮಾತನ್ನು ಕೇಳದೆ ಬುದ್ಧಿಯ ಮಾತನ್ನು ಕೇಳುವುದು ಉಚಿತವಾದುದು. ಮನಸ್ಸು ಸರಿ ಮತ್ತು ತಪ್ಪು ಹಾಗೂ ಒಳ್ಳೆಯ ಮತ್ತು ಕೆಟ್ಟ ಎರಡು ರೀತಿಯಲ್ಲೂ ಚಿಂತಿಸುವಂತೆ ಮಾಡುತ್ತದೆ. ಆದರೆ, ಬುದ್ಧಿಯು ಕೇವಲ ಸರಿಯಾದ ವಿಷಯದ ಕುರಿತು ಹಾಗೂ ಒಳ್ಳೆಯದರ ಬಗ್ಗೆಯೇ ಚಿಂತಿಸುವಂತೆ ಮಾಡುತ್ತದೆ. ನಮ್ಮ ಭಾವನೆಗಳು ಶುದ್ಧವಾಗಿದ್ದರೆ ಭಾಗ್ಯವು ತಾನಾಗಿಯೇ ಒಲಿದು ಬರುತ್ತದೆ ಎನ್ನುತ್ತಾರೆ. ಅದಕ್ಕಾಗಿಯೇ ಬಸವಣ್ಣನವರು ನಮ್ಮ ಭಾವನೆಯಲ್ಲಿರುವ ಕೆಟ್ಟ ಆಲೋಚನೆಯನ್ನು ಮನ್ನಿಸಿ ಕೃಪೆ ಮಾಡು ಎಂದು ಪ್ರಾರ್ಥಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.