ADVERTISEMENT

ಬೆಳಗಾವಿ: ಹಳ್ಳಕ್ಕೆ ‘ವರ’ವಾದ ಉದ್ಯೋಗ ಗ್ರಾಮೀಣ ಖಾತ್ರಿ ಯೋಜನೆ

ಹೊನಗಾ ಅರಣ್ಯ ಪ್ರದೇಶದಲ್ಲಿ ಡ್ಯಾಂನಂತೆ ಅಭಿವೃದ್ಧಿ

ಎಂ.ಮಹೇಶ
Published 24 ಜೂನ್ 2020, 19:30 IST
Last Updated 24 ಜೂನ್ 2020, 19:30 IST
ಬೆಳಗಾವಿ ತಾಲ್ಲೂಕಿನ ಹೊನಗಾ ಅರಣ್ಯ ಪ್ರದೇಶದ ಹಳ್ಳದ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಈಚೆಗೆ ವೀಕ್ಷಿಸಿದರು.
ಬೆಳಗಾವಿ ತಾಲ್ಲೂಕಿನ ಹೊನಗಾ ಅರಣ್ಯ ಪ್ರದೇಶದ ಹಳ್ಳದ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಈಚೆಗೆ ವೀಕ್ಷಿಸಿದರು.   

ಬೆಳಗಾವಿ: ತಾಲ್ಲೂಕಿನ ಹೊನಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿರುವ ‘ವರವಿನಹಳ್ಳ’ಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಗ್ರಾಮೀಣ ಖಾತ್ರಿ ಯೋಜನೆಯಡಿ ಕಾಯಕಲ್ಪ ನೀಡಲಾಗಿದ್ದು, ಅದೀಗ ಡ್ಯಾಂನಂತೆ ಕಾಣಿಸುತ್ತಿದೆ.

ಈ ಮಾದರಿ ಕಾರ್ಯವು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಸೆಳೆದಿದೆ.

ಈ ಪ್ರದೇಶದಲ್ಲಿ ಬಿದ್ದ ಮಳೆ ನೀರು ವ್ಯರ್ಥವಾಗಿ ಹರಿದು ಹೋಗಿ ಮಾರ್ಕಂಡೇಯ ನದಿಗೆ ಸೇರುತ್ತಿತ್ತು. ಹಿಂದೆ ಇಲ್ಲಿ ಸಣ್ಣದಾದ ಹಳ್ಳ ಇತ್ತಾದರೂ ನೀರು ಸಂಗ್ರಹಕ್ಕೆ ಅಗತ್ಯವಾದ ವ್ಯವಸ್ಥೆ ಇರಲಿಲ್ಲ. ಇದನ್ನು ಗಮನಿಸಿ ಜಿಲ್ಲಾ ಪಂಚಾಯಿತಿಯಿಂದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಈಗ, ಕಾಮಗಾರಿಯು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಕಾಕತಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿರುವ ಈ ಹಳ್ಳದಿಂದ ತೋಳ, ನರಿ ಮೊದಲಾದ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಮುಖ್ಯವಾಗಿ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ.

ADVERTISEMENT

ದುಡಿಯುವ ಕೈಗಳಿಗೆ ಕೆಲಸ

ಹೊನಗಾ, ಹಳೆಹೊಸೂರು, ಬೆನ್ನಾಳಿ, ದಾಸರವಾಡಿ ಮೊದಲಾದ ಗ್ರಾಮಗಳ ಕೂಲಿಕಾರ್ಮಿಕರನ್ನು ಬಳಸಿ ಪುನಶ್ಚೇತನ ನೀಡಲಾಗಿದೆ. ಎಲ್ಲ ಕೆಲಸವನ್ನೂ ಅವರಿಂದಲೇ ಮಾಡಿಸಿರುವುದು ವಿಶೇಷ. ದೊಡ್ಡದಾಗಿ ಬದು ನಿರ್ಮಿಸಲಾಗಿದೆಯಾದರೂ ಯಾವುದೇ ಯಂತ್ರವನ್ನು ಬಳಸಿಲ್ಲ. ₹ 24 ಲಕ್ಷ ಯೋಜನೆಯಲ್ಲಿ, 3ಸಾವಿರಕ್ಕೂ ಹೆಚ್ಚಿನ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದರಿಂದ ಆ ಭಾಗದ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಂತಾಗಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಈಚೆಗೆ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಮಾದರಿ ಕಾರ್ಯ ಇದಾಗಿದೆ. ಇಂತಹ ಪುನರುಜ್ಜೀವನ ಚಟುವಟಿಕೆಗಳು ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವುದು ಅಭಿನಂದನಾರ್ಹ’ ಎಂದು ಜಿಲ್ಲಾ ಪಂಚಾಯಿತಿಯ ಬೆನ್ನು ತಟ್ಟಿದ್ದಾರೆ.

ಸಾಮರ್ಥ್ಯ ವೃದ್ಧಿ

ಈ ಹಳ್ಳಕ್ಕೆ ಹಿಂದೆ ಸಣ್ಣದಾದ ಬಂಡು ಇತ್ತು. ಅದು ಹೋದ ವರ್ಷ ಬಂದ ಜೋರು ಮಳೆಯಿಂದ ಕೊಚ್ಚಿಕೊಂಡು ಹೋಗಿತ್ತು. ಈಗ ಅದನ್ನು ಎತ್ತರಿಸಲಾಗಿದೆ. ಹೂಳು ತೆಗೆಯಲಾಗಿದೆ. 65 ಮೀಟರ್ ಉದ್ದ ಹಾಗೂ 49 ಮೀಟರ್ ಅಗಲ ಮಾಡಲಾಗಿದೆ. ಸುಮಾರು 1.8 ಮೀಟರ್‌ನಷ್ಟು ಆಳದಲ್ಲಿ ನೀರು ಸಂಗ್ರಹವಾಗುವಂತೆ ಸಜ್ಜುಗೊಳಿಸಲಾಗಿದೆ. ಕಾಯಕಲ್ಪಗೊಂಡ ನಂತರ ಆಳ, ಅಗಲ ಹಾಗೂ ಉದ್ದ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವ ನಿರೀಕ್ಷೆ ಇದೆ.ಬದುವನ್ನು ಸುಭದ್ರ ಮಾಡಿರುವುದರಿಂದಾಗಿ, ವ್ಯರ್ಥವಾಗಿ ನೀರು ಹರಿದು ಹೋಗುವುದಕ್ಕೆ ತಡೆ ಬೀಳುತ್ತದೆ ಎಂದು ನಿರೀಕ್ಷಿಸಲಾಗಿದೆ.

‘ಆ ಹಳ್ಳವೀಗ ಜಲಾಶಯದಂತೆ ಕಾಣುತ್ತಿದೆ. ಉತ್ತಮ ಕೆಲಸ ನಡೆದಿದೆ. ಎಲ್ಲವನ್ನೂ ಕೂಲಿ ಕಾರ್ಮಿಕರಿಂದಲೇ ಮಾಡಿಸಿರುವುದು ವಿಶೇಷ. ಇದರಿಂದ ಆ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೃಷಿ ಚುಟವಟಿಕೆಗಳಿಗೂ ಅನುಕೂಲ ಆಗಲಿದೆ. ಸಮೀಪದಲ್ಲಿರುವ ಹೆಗ್ಗೇರಿಯ ಸಣ್ಣ ಕೆರೆಗೂ ಉಪಯೋಗವಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.