ADVERTISEMENT

ಪಶು ವೈದ್ಯಕೀಯ ಕಾಲೇಜು ಮುಂದಿನ ವರ್ಷ ಆರಂಭ: ಸವದಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 6:22 IST
Last Updated 17 ಆಗಸ್ಟ್ 2021, 6:22 IST
ಅಥಣಿ ತಾಲ್ಲೂಕಿನ ಕೊಕಟನೂರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಚಾಲನೆ ನೀಡಿದರು
ಅಥಣಿ ತಾಲ್ಲೂಕಿನ ಕೊಕಟನೂರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಚಾಲನೆ ನೀಡಿದರು   

ತೆಲಸಂಗ: ‘ಕೊಕಟನೂರ ಗ್ರಾಮದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪಶು ವೈದ್ಯಕೀಯ ಮಹಾವಿದ್ಯಾಲಯ ಆರಂಭವಾಗಲಿದೆ. ಕೃಷಿ ಕಾಲೇಜು ನಿರ್ಮಾಣ ಮತ್ತು ಕೇಂದ್ರಿಯ ವಿದ್ಯಾಲಯಕ್ಕೆ 10 ಎಕರೆ ಜಾಗ ನಿಗದಿಯಾಗಿದೆ. ಜಿಲ್ಲಾ ಕೇಂದ್ರದಲ್ಲಿ ದೊರೆಯುವ ಸೌಲಭ್ಯ ಗ್ರಾಮೀಣ ರೈತ ಮಕ್ಕಳಿಗೂ ಸಿಗಬೇಕು ಎನ್ನುವ ಉದ್ದೇಶದಿಂದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲ್ಲೂಕಿನ ಕೊಕಟನೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಕಾಮಗಾರಿಗೆ ಸೋಮವಾರ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕೊಕಟನೂರದಿಂದ ಐಗಳಿ ವಿದ್ಯುತ್‌ ಉಪಕೇಂದ್ರದವರೆಗೆ 9.9 ಕಿ.ಮೀ. ರಸ್ತೆ ಕಾಮಗಾರಿಗೆ ₹ 5 ಕೋಟಿ, ಐಗಳಿ ವಿದ್ಯುತ್‌ ಉಪ ಕೇಂದ್ರದಿಂದ ಅರಟಾಳದವರೆಗೆ ₹ 2.50 ಕೋಟಿ ಮಂಜೂರಾಗಿದೆ. ಅಲ್ಲದೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದ್ದು, ಜೇವರ್ಗಿ–ಸಂಕೇಶ್ವರ ರಾಜ್ಯ ಹೆದ್ದಾರಿಯನ್ನು ₹ 497 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ನಿರ್ಮಾಣ ಮಾಡಲು ಸಮ್ಮತಿಸಿದ್ದಾರೆ.
ಕೊಕಟನೂರ ಗ್ರಾಮದಲ್ಲಿ ನೆಮ್ಮದಿ ಕೇಂದ್ರ, ಐಗಳಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ತೆರೆಯಲಾಗುವುದು. ಅಥಣಿ ಪಟ್ಟಣದಲ್ಲಿ ದಿನದ 24 ಗಂಟೆಯೂ ನೀರು ಪೂರೈಸಲು ₹ 55 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ’ ಎಂದರು.

ADVERTISEMENT

ಬೆಮುಲ್ ನಿದೇರ್ಶಶಕ ಅಪ್ಪಾಸಾಬ ಅವತಾಡೆ ಮಾತನಾಡಿ, ‘ಸವದಿ ಅವರ ಕಾರ್ಯದಕ್ಷತೆ ನೋಡಿ ಹೈಕಮಾಂಡ್ ಉಪ ಮುಖ್ಯಮಂತ್ರಿ ಸ್ಥಾನ ನೀಡಿತ್ತು. ಬರುವ ದಿನಗಳಲ್ಲಿ ಅವರಿಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ’ ಎಂದು ಹೇಳಿದರು.

ಮುಖಂಡರಾದ ಸಿ.ಎಸ್. ನೇಮಗೌಡ, ಶ್ರೀಶೈಲ ಕಾಡದೇವರಮಠ, ಅಣ್ಣಸಾಬ ಪಾಟೀಲ, ಜಾಯಪ್ಪ ದೇಸಾಯಿ, ಗುರುಮೂರ್ತಯ್ಯ ಕಾಡದೇವರಮಠ, ಅಣ್ಣಪ್ಪ ಖೋತ, ತಮ್ಮಣ್ಣ ಮಗರ, ಮಹೇಶ ಕಾಡದೇವರಮಠ, ಶಿವನಿಂಗ ಧಡಕೆ, ಯಶವಂತ ಪೋಳ, ತಾ.ಪಂ. ಸದಸ್ಯ ಯಲ್ಲಪ್ಪ ಮಿರ್ಜಿ, ಬಸವರಾಜ ಬಿರಾದಾರ, ಸುರೇಶ ಗೂಳಪ್ಪನವರ, ಲೋಕೋಪಯೋಗಿ ಇಲಾಖೆ ಎಇಇ ಜಯಾನಂದ ಹಿರೇಮಠ, ಎಂಜಿನಿಯರ್ ಜಿ.ಎಸ್. ಗೂಳಪ್ಪನವರ ಇದ್ದರು.

ಸುರೇಶ ಪೂಜಾರಿ ಸ್ವಾಗತಿಸಿದರು. ಸುಭಾಷ ಸೋನಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.