
ಹೂಲಿ(ಬೆಳಗಾವಿ ಜಿಲ್ಲೆ): ‘ಊರಲ್ಲಿ ಮನೆ ನಿರ್ಮಾಣಕ್ಕಾಗಿ ಎಲ್ಲಿ ಅಗೆದರೂ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯವರು ನೋಟಿಸ್ ಕೊಡುತ್ತಾರೆ. ಊರು ಬಿಟ್ಟು ಬೇರೆ ಕಡೆ ಮನೆ ಕಟ್ಟಿಸೋಣ ಎಂದರೆ, ಅವರು ಜಾಗವನ್ನೂ ಕೊಡುತ್ತಿಲ್ಲ. ಹಾಗಾದರೆ ನಾವು ವಾಸಿಸುವುದು ಎಲ್ಲಿ? ಹೀಗೆ ಹಳೇ ಮನೆಗಳಲ್ಲೇ ಇರಬೇಕಾ...’
ಸವದತ್ತಿ ತಾಲ್ಲೂಕಿನ ಹೂಲಿಯಲ್ಲಿ ಮಂಗಳವಾರ ‘ಪ್ರಜಾವಾಣಿ’ಗೆ ಹೀಗೆ ಸಮಸ್ಯೆ ತೋಡಿಕೊಂಡವರು ಗ್ರಾಮಸ್ಥ ಉಮೇಶ ಕಮ್ಮಾರ. ಇದು ಅವರೊಬ್ಬರದ್ದೇ ಅಲ್ಲ, ಬಹುತೇಕ ಗ್ರಾಮಸ್ಥರು ಎದುರಿಸುತ್ತಿರುವ ಸಂಕಷ್ಟ.
ವಾಸ್ತುಶಿಲ್ಪ ದೃಷ್ಟಿಯಿಂದ ಶ್ರೀಮಂತವಾಗಿರುವ ಹೂಲಿ ಐತಿಹಾಸಿಕ ಮಹತ್ವ ಪಡೆದಿದ್ದು, ಮಹಾ ಅಗ್ರಹಾರವೆಂದೇ ಪ್ರಸಿದ್ಧಿ ಗಳಿಸಿತ್ತು. ಒಂದು ಕಾಲಕ್ಕೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ್ದ 101 ದೇವಾಲಯ ಇಲ್ಲಿದ್ದವು. ಇನ್ನೂ ಕೆಲವಷ್ಟು ಇಲ್ಲಿವೆ. ವಾಸ್ತುಶಿಲ್ಪಕ್ಕೆ ಧಕ್ಕೆ ಬರುವುದನ್ನು ತಪ್ಪಿಸಲು ದೇವಾಲಯ ಸುತ್ತಲಿನ 100 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ನಿಷೇಧವಿದೆ.
ಈ ಮಧ್ಯೆ, ‘ಸ್ಮಾರಕದ ಸುತ್ತಲಿನಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡಬಾರದು’ ಎಂದು ಇಲಾಖೆಯು ಇದೇ ವರ್ಷದ ಜ.5ರಂದು ಸ್ಥಳೀಯ ಗ್ರಾಮ ಪಂಚಾಯಿತಿಗೆ ಮತ್ತೆ ಪತ್ರ ಬರೆದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
‘ದೇಗುಲಗಳ ಬಳಿಯಷ್ಟೇ ಅಲ್ಲ; ಇಡೀ ಊರಲ್ಲಿ ಎಲ್ಲೇ ಹೊಸ ಮನೆ ನಿರ್ಮಿಸಲು ಮುಂದಾದರೂ ನೋಟಿಸ್ ಬರುತ್ತಿದೆ. ನಮ್ಮ ಸ್ವಂತ ಜಾಗದಲ್ಲಿ ಮನೆ ಕಟ್ಟಲು ಅಡ್ಡಿಪಡಿಸುವುದು ಸರಿಯೇ’ ಎಂಬುದು ಗ್ರಾಮಸ್ಥರಾದ ಬಸವರಾಜ ಬಡಿಗೇರ ಮತ್ತು ಯಲ್ಲಪ್ಪ ಹೆಬ್ಬಾರ ಪ್ರಶ್ನೆ.
ದೇಗುಲಗಳ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಕಟ್ಟಡ ನಿರ್ಮಾಣಕ್ಕಾಗಿ ಬೇರೆ ಜಾಗ ನೀಡುವ ಕುರಿತ ಹೂಲಿ ಗ್ರಾಮಸ್ಥರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದುಸ್ಮಿತಾ ರೆಡ್ಡಿ ನಿರ್ದೇಶಕಿ(ವಸ್ತು ಸಂಗ್ರಹಾಲಯಗಳು) ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉತ್ತರ ವಲಯ ಧಾರವಾಡ
ಪುರಾತನ ದೇವಾಲಯಗಳ ಬಳಿ ಮನೆ ನಿರ್ಮಾಣಕ್ಕೆ ಇಲಾಖೆ ಅಡ್ಡಿಪಡಿಸುವುದು ನಿಲ್ಲಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರಿಗೆ ಊರ ಬಳಿಯೇ ಸೂಕ್ತ ಜಾಗ ನೀಡಿ ಮನೆ ನಿರ್ಮಾಣಕ್ಕೂ ಸರ್ಕಾರ ನೆರವು ಒದಗಿಸಬೇಕು.ವಿರೂಪಾಕ್ಷಿ ತೊರಗಲ್ಲ ಗ್ರಾಮ ಪಂಚಾಯಿತಿ ಸದಸ್ಯ
ಹೂಲಿಯ ದೇವಾಲಯಗಳ ಸುತ್ತಲೂ ಅಕ್ರಮವಾಗಿ ಸಂಗ್ರಹಿಸಲಾಗಿರುವ ಉರುವಲು ಕಟ್ಟಿಗೆ ಬಣಿವೆಯನ್ನು ಆಗಾಗ್ಗೆ ತೆರವು ಮಾಡುತ್ತೇವೆ. ಬೇಸಿಗೆಯಲ್ಲಿ ಮತ್ತೆ ತೆರವು ಕಾರ್ಯಾಚಣೆ ಮಾಡುತ್ತೇವೆ.ಮಹಾದೇವಪ್ಪ ಕಳ್ಳಿ ಪಿಡಿಒ