ADVERTISEMENT

ಸೈಕ್ಲಿಂಗ್ ವೇಳೆ ಹೃದಯಾಘಾತ: ಮಾಜಿ ಶಾಸಕರ ಪುತ್ರ ಸಾವು

100 ಕಿ.ಮೀ ಕ್ರಮಿಸುವುದಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ವಿನೋದ ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 10:13 IST
Last Updated 13 ಸೆಪ್ಟೆಂಬರ್ 2020, 10:13 IST
ವಿನೋದ ಎಸ್.ಪಾಟೀಲ
ವಿನೋದ ಎಸ್.ಪಾಟೀಲ   

ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ಸೈಕ್ಲಿಂಗ್ ಕ್ಲಬ್ ಸದಸ್ಯ, ಅಮೆಚೂರ್ ಸೈಕ್ಲಿಸ್ಟ್ ವಿನೋದ ಪಾಟೀಲ (47) ಭಾನುವಾರ ಬಾದಾಮಿ ಬಳಿ ಸೈಕ್ಲಿಂಗ್ ಮಾಡುವಾಗ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಬೀಳಗಿಯ ಮಾಜಿ ಶಾಸಕ ಎಸ್.ಎಸ್.ಪಾಟೀಲ ಪುತ್ರರಾದ ವಿನೋದ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಉದ್ಯೋಗಿ. ಕ್ಲಬ್‌ನ ಉಳಿದ ಸದಸ್ಯರೊಂದಿಗೆ ನಿತ್ಯ ಸೈಕ್ಲಿಂಗ್ ಹೋಗುತ್ತಿದ್ದರು.ಶನಿವಾರ 70 ಕಿ.ಮೀ ದೂರ ಸೈಕಲ್‌ನಲ್ಲಿ ಕ್ರಮಿಸಿದ್ದರು ಎಂದು ತಿಳಿದುಬಂದಿದೆ.

’ಸೆಂಚುರಿ ಬಾರಿಸುವ ಅವಕಾಶ ತಪ್ಪಿಸಿಕೊಂಡೆ. ಭಾನುವಾರ ರಜೆ ಇರುವುದರಿಂದ 100 ಕಿ.ಮೀ ಕ್ರಮಿಸುವೆಎಂದು ಹಿಂದಿನ ದಿನ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಎಂದಿನಂತೆಯೇ ಮುಂಜಾನೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಮನೆಯಿಂದ ಸೈಕ್ಲಿಂಗ್‌ಗೆ ತೆರಳಿದ್ದರು.

ADVERTISEMENT

ಬಾದಾಮಿ ತಾಲ್ಲೂಕಿನ ಕೆರೂರು ಬಳಿ ರಾಷ್ಟ್ರೀಯ 218ರಲ್ಲಿ ಸೈಕಲ್ ಓಡಿಸುವಾಗಲೇ ಹೃದಯಾಘಾತವಾಗಿ ವಿನೋದ ಕುಸಿದುಬಿದ್ದಿದ್ದಾರೆ. ಅವರ ಸೈಕ್ಲಿಂಗ್ ತಂಡದಲ್ಲಿ ಇದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಕೆರೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದಾರಿ ಮಧ್ಯೆಯೇ ವಿನೋದ ಸಾವಿಗೀಡಾಗಿದ್ದಾರೆ ಎಂದು ಮಾಜಿ ಅಂತಾರಾಷ್ಟ್ರೀಯ ಸೈಕ್ಲಿಸ್ಟ್ ಸಿದ್ದು ಸರವಾರಿ ’ಪ್ರಜಾವಾಣಿ’ಗೆ ತಿಳಿಸಿದರು. ವಿನೋದ ಪಾಟೀಲ ಅವರಿಗೆ ಪತ್ನಿ, ಪುತ್ರ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.