ADVERTISEMENT

ವಿಟಿಯು: ವರ್ಚುವಲ್ ಲ್ಯಾಬ್‌ ಮೂಲಕ ಕಲಿಕೆ

ಸುರತ್ಕಲ್‌ನ ಎನ್ಐಟಿಕೆ ಸಹಯೋಗ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 9:54 IST
Last Updated 28 ಸೆಪ್ಟೆಂಬರ್ 2020, 9:54 IST

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ) ಸಹಯೋಗದಲ್ಲಿ ತನ್ನ ಎಲ್ಲ ಅಂಗ ಸಂಸ್ಥೆಗಳಲ್ಲಿ ‘ವರ್ಚುವಲ್ ಲ್ಯಾಬ್‌’ ಮೂಲಕ ತಂತ್ರಜ್ಞಾನ ಕಲಿಕೆ ಅನುಷ್ಠಾನಗೊಳಿಸುತ್ತಿದೆ.

ಈ ನಿಟ್ಟಿನಲ್ಲಿ ಈಚೆಗೆ ವಿಟಿಯು ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರ ಆನ್‌ಲೈನ್ ಸಭೆ ಆಯೋಜಿಸಿತ್ತು.

ಎನ್‌ಐಟಿಕೆಯ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ ಮುಖ್ಯಸ್ಥ ಪ್ರೊ.ಕೆ.ವಿ. ಗಂಗಾಧರನ್ ಮಾತನಾಡಿ, ‘ವರ್ಚುವಲ್ ಲ್ಯಾಬ್ಸ್’ ಎನ್ನುವುದು ಕೇಂದ್ರ ಸರ್ಕಾರದ ಧನ ಸಹಾಯದ ಅಡಿಯಲ್ಲಿ ಐಸಿಟಿ ಮೂಲಕ ಅನುಷ್ಠಾನಗೊಳಿಸುತ್ತಿರುವ ಶಿಕ್ಷಣದ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ದೆಹಲಿಯ ಐಐಟಿ ಮುಂದಾಳತ್ವದಲ್ಲಿ ರಾಷ್ಟ್ರದ ಪ್ರಮುಖ 11 ತಾಂತ್ರಿಕ ಶಿಕ್ಷಣ ಸಂಸ್ಥೆಗಳು ವರ್ಚುವಲ್ ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸಿವೆ. ಇದರಲ್ಲಿ ಕರ್ನಾಟಕದ ಎನ್‌ಐಟಿಕೆ ಒಂದಾಗಿದೆ. ಎಂಜಿನಿಯರಿಂಗ್ ಮತ್ತು ವಿಜ್ಞಾನ ವಿಷಯಗಳಲ್ಲಿ ಪರಿಣಾಮಕಾರಿ ಕಲಿಕೆಗೆ ಸಹಾಯ ಮಾಡಲು ಇದು ಉತ್ತಮ ವೇದಿಕೆಯಾಗಿದೆ. ಇದು ಉಚಿತವಾಗಿದ್ದು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಪ್ರಯೋಗಗಳನ್ನು ಹೊಂದಿದೆ’ ಎಂದು ಪ್ರೊ. ಕೆ. ವಿ. ಗಂಗಾಧರನ ಹೇಳಿದರು.

ADVERTISEMENT

‘ವಿಟಿಯು ಇಂಜಿನಿಯರಿಂಗ್ ಮತ್ತು ಅನ್ವಯಿಕ ವಿಜ್ಞಾನಗಳಲ್ಲಿನ ವಿಷಯಗಳಿಗೆ ಸಂಬಂಧಿಸಿದ ವರ್ಚುವಲ್ ಲ್ಯಾಬ್‌ಗಳನ್ನು ಬಳಸಲಿದೆ. ಎಲ್ಲ ಇಂಜಿನಿಯರಿಂಗ್ ಸಂಸ್ಥೆಗಳು ನೋಡಲ್ ಕೇಂದ್ರಗಳಾಗಿ ಕೆಲಸ ಮಾಡಲಿದ್ದು ಆಯಾ ಸಂಸ್ಥೆಗಳ ಅಧ್ಯಾಪಕರಿಗೆ ತರಬೇತಿ ನೀಡಲಿದ್ದು ನಂತರ ಅವರು ಆಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಇದರ ಬಳಕೆ ಕುರಿತು ಹೇಳುವರು. ವಿಟಿಯು ಪಠ್ಯಕ್ರಮಕ್ಕೆ ಅನುಗುಣವಾಗಿ ಈ ವರ್ಚುವಲ್ ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದೆ ಪರಿಷ್ಕೃತ ಪಠ್ಯಕ್ರಮದಲ್ಲಿ ವರ್ಚುವಲ್ ಲ್ಯಾಬ್‌ಗಳಲ್ಲಿನ ಪ್ರಯೋಗಗಳನ್ನು ಸೇರಿಸಲಾಗುವುದು’ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ಹೇಳಿದರು.

190 ಎಂಜಿನಿಯರಿಂಗ್ ಕಾಲೇಜ್‌ಗಳ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.